ದಾವಣಗೆರೆ : ಸಚಿವರ ಮನೆ ಮುತ್ತಿಗೆ ಚಳವಳಿಯಲ್ಲಿ ಆಯ್ದ ವ್ಯಕ್ತಿಗಳು ಮಾತ್ರ ಭಾಗವಹಿಸಿರುವ ಕುರಿತು ಎದ್ದಿರುವ ಪ್ರಶ್ನೆಗಳಿಗೆ ರೈತ ನಾಯಕ ತೇಜಸ್ವಿ ಪಟೇಲ್ ತಿರುಗೇಟು ನೀಡಿದ್ದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಅವರ ತಂಡಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಕಳೆದ ಪ್ರತಿಭಟನೆಯ ವೇಳೆ ನಡೆದ ಬೆಳವಣಿಗೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, "ಕಳೆದ ಪ್ರತಿಭಟನೆಯ ವೇಳೆ 'ಕ್ರೆಡಿಟ್ ಪಾಕೆಟ್' ನಡೆಯಿತು. ಸಾರ್ವಜನಿಕರು ಹೆಚ್ಚಾಗಿ ಸೇರಿರುವ ಜಾಗದಲ್ಲಿ ಪಿಕ್‌ಪಾಕೆಟರ್ಸ್ ಬರುವ ರೀತಿಯಲ್ಲೇ, ಪ್ರತಿಭಟನೆ ಯಶಸ್ವಿಯಾಗುತ್ತದೆ ಎಂಬ ಗ್ಯಾರಂಟಿ ಮೇಲೆ ಕೆಲವರು ಏಕಾಏಕಿ ಬಂದು ಫೋಟೋ ಮತ್ತು ಪ್ರಚಾರದ 'ಪಿಕ್ ಕ್ರೆಡಿಟ್' ಪಡೆಯಲು ಬರುತ್ತಾರೆ" ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು. ಈ ಹಿಂದಿನ ಟ್ರ್ಯಾಕ್ಟರ್ ರ್ಯಾಲಿ ವೇಳೆ ಏಕಾಏಕಿ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೇಣುಕಾಚಾರ್ಯ ಅವರ ನಡೆಗೆ ಈ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಈ ಕಾರಣಕ್ಕಾಗಿಯೇ ಪ್ರಸ್ತುತ ಪ್ರತಿಭಟನೆಯಲ್ಲಿ ಆಯ್ದ ವ್ಯಕ್ತಿಗಳನ್ನು ಮಾತ್ರ ಭಾಗಿಯಾಗುವಂತೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ವಿರೋಧ ಪಕ್ಷದಲ್ಲಿದ್ದವರು ನಮ್ಮ ರೈತ ಪ್ರತಿಭಟನೆಯಲ್ಲಿ ಭಾಗಿಯಾಗುವುದು ಬೇಡ. ಬೇಕಿದ್ದರೆ ಆಡಳಿತ ಪಕ್ಷದಲ್ಲಿರುವವರು ಬಂದು ಭಾಗಿಯಾಗಲಿ ಎಂದು ಸವಾಲೆಸೆದಿದ್ದಾರೆ.
"ನಮ್ಮ ಪ್ರತಿಭಟನೆಗೆ ತನ್ನದೇ ಆದ ಒಂದು ಪಾವಿತ್ರ್ಯತೆ ಇದೆ. ಪ್ರಚಾರಕ್ಕಾಗಿ ಬಂದು ಅದನ್ನು ಕೆಡಿಸಲು ಹೋಗಬೇಡಿ" ಎಂದು ರೈತ ನಾಯಕ ತೇಜಸ್ವಿ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
PublicNext
04/11/2026 12:37 pm
LOADING...