ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಐತಿಹಾಸಿಕ ಕೆರೆ ಒತ್ತುವರಿ : ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಿಲ್ಲ..

ದಾವಣಗೆರೆ : ಒಂದು ಕಾಲದಲ್ಲಿ ಗ್ರಾಮಸ್ಥರು ಮತ್ತು ಜಾನುವಾರುಗಳ ಜೀವನಾಡಿಯಾಗಿದ್ದ ಐತಿಹಾಸಿಕ ಕೆರೆ ಇಂದು ಒತ್ತುವರಿಯ ಸುಳಿಯಲ್ಲಿ ಸಿಲುಕಿದೆ. ಕೆರೆಗಾಗಿ ಭೂಸ್ವಾಧೀನ ಮಾಡಿ ಪರಿಹಾರ ನೀಡಿದರೂ, ಒತ್ತುವರಿ ತೆರವು ಮಾತ್ರ ಆಗಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿದ್ದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಇದೀಗ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಯಾವುದು ಆ ಕೆರೆ? ಗ್ರಾಮಸ್ಥರ ಸಮಸ್ಯೆಯೇನು? ಅಂತಿರಾ ಆಗಿದ್ರೆ ಈ ಸ್ಟೋರಿ ನೋಡಿ

ವಿಶಾಲವಾಗಿ ಹರಡಿರುವ ಕೆರೆ ಆವರಣ, ಆವರಣದ ಮಧ್ಯೆ ನಿಂತಿರುವ ನೂರಾರು ಜನ ಗ್ರಾಮಸ್ಥರು, ಕೈಯಲ್ಲಿ ದಾಖಲೆ ಹಿಡಿದು ಆಕ್ರೋಶ ಹೊರಹಾಕುತ್ತಿರುವ ರೈತರು ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಐತಿಹಾಸಿಕ ಕೆರೆಗೆ ಈಗ ಒತ್ತುವರಿ ಕಳಂಕ ಅಂಟಿಕೊಂಡಿದೆ, ಸರ್ವೇ ನಂಬರ್ 56ರಲ್ಲಿ ಇರುವ ಬರೋಬ್ಬರಿ 62.27 ಎಕರೆ ವಿಸ್ತೀರ್ಣದ ಕೆರೆಗಾಗಿ ಜಮೀನಿನನ್ನು 1977–78ರಲ್ಲೇ ಭೂಸ್ವಾಧೀನ ಮಾಡಿಕೊಂಡು ಪರಿಹಾರವನ್ನೂ ನೀಡಲಾಗಿದೆ ಎನ್ನಲಾಗಿದೆ. ಆದ್ರೆ, ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದರೂ ಕೆರೆ ಜಾಗದ ಒತ್ತುವರಿ ತೆರವು ಮಾತ್ರ ಇನ್ನೂ ಮಾಡಿಲ್ಲ ಎಂಬುದು ಗ್ರಾಮಸ್ಥರ ಆರೋಪ ಆಗಿದೆ, ಗ್ರಾಮಸ್ಥರ ಪ್ರಕಾರ, ಕೆರೆಯು ಸುಮಾರು 20ರಿಂದ 30 ಎಕರೆ ಪ್ರದೇಶ ಒತ್ತುವರಿಯಾಗಿದೆ. ಇದರಿಂದ ಕೆರೆ ಪ್ರದೇಶಕ್ಕೆ ತೆರಳಲು ಕೂಡ ಸಮಸ್ಯೆಯಾಗಿದ್ದು, ಜಾನುವಾರುಗಳಿಗೆ ನೀರು ಕುಡಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೆರೆಯ ಅಭಿವೃದ್ಧಿ ಕುಂಠಿತವಾಗಿದ್ದು, ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆರೆ ಒತ್ತುವರಿ ತೆರವು ಮಾಡುವಂತೆ ಕಳೆದ ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗುತ್ತಾರೆಯೇ ಹೊರತು, ಒತ್ತುವರಿ ತೆರವಿಗೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕೆರೆಯನ್ನು ಸಮಗ್ರವಾಗಿ ಸರ್ವೆ ನಡೆಸಿ, ಗಡಿ ಗುರುತಿಸಿ ಹದ್ದುಬಸ್ತ್ ಮಾಡಬೇಕು. ಒತ್ತುವರಿ ತೆರವುಗೊಳಿಸಿ ಕೆರೆಯ ಹೂಳು ತೆಗೆದು ಅಭಿವೃದ್ಧಿಪಡಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆ ಆಗಿದೆ. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಐತಿಹಾಸಿಕ ಕೆರೆಯ ಉಳಿವಿಗಾಗಿ ಗ್ರಾಮಸ್ಥರ ಹೋರಾಟ ಮುಂದುವರಿದಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಕೆರೆಯನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಅಭಿವೃದ್ಧಿಪಡಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Edited By :
PublicNext

PublicNext

31/10/2026 10:52 am

Cinque Terre

10.29 K

Cinque Terre

0

ಸಂಬಂಧಿತ ಸುದ್ದಿ