ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ : ಪ್ರತಿಭಟನೆ

ದಾವಣಗೆರೆ: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಾಲಿನ ದರ ಹೆಚ್ಚಳವನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ದಾವಣಗೆರೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಗ್ರ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕೆ. ಬಿ. ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯು ಎಸಿ ಕಚೇರಿಯವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ನೂರಾರು ಮಹಿಳಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ಗಾಂಧಿ ವೃತ್ತ ಹಾಗೂ ಮಹಾನಗರ ಪಾಲಿಕೆ ವೃತ್ತಗಳಲ್ಲಿ ಮಹಿಳೆಯರು ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆದು ಆಕ್ರೋಶ ಹೊರಹಾಕಿದರು. ಮಹಾನಗರ ಪಾಲಿಕೆ ವೃತ್ತದ ಬಳಿ ಹಾಲಿನ ದರ ಏರಿಕೆಯನ್ನು ಖಂಡಿಸಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು, ಹಾಲನ್ನೇ ಬಳಸದೆ 'ಕಪ್ಪು ಚಹಾ' (ಬ್ಲ್ಯಾಕ್ ಟೀ) ತಯಾರಿಸಿ ಪ್ರದರ್ಶಿಸಿದರು.

ಅಲ್ಲದೆ, ಹಲವು ಮಹಿಳೆಯರು ತಲೆಯ ಮೇಲೆ ಖಾಲಿ ಹಾಲಿನ ಕ್ಯಾನ್‌ಗಳನ್ನು ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ರಾಜ್ಯ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವ್ಯಂಗ್ಯ ಮಾಡುವಂತಹ ಪ್ಲೇಕಾರ್ಡ್ ಮತ್ತು ಪೋಸ್ಟರ್‌ಗಳನ್ನು ಕೈಯಲ್ಲಿ ಹಿಡಿದು ಜನವಿರೋಧಿ ಧೋರಣೆಯ ವಿರುದ್ಧ ಧ್ವನಿ ಎತ್ತಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, "ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರು ಜೀವನ ನಡೆಸಲು ರೋಸಿ ಹೋಗಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಹಾಲಿನ ದರವನ್ನು ಮತ್ತೆ ಏರಿಕೆ ಮಾಡುವ ಮೂಲಕ ಸರ್ಕಾರ ನೇರವಾಗಿ ಬಡವರ ಮತ್ತು ಮಧ್ಯಮ ವರ್ಗದವರ ಜೋಬಿಗೆ ಕನ್ನ ಹಾಕಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರ ಅತ್ಯಂತ ಖಂಡನೀಯ" ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಮುಖ ಗಣ್ಯರು, ಪದಾಧಿಕಾರಿಗಳು ಹಾಗೂ ನೂರಾರು ಮಹಿಳಾ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

Edited By :
PublicNext

PublicNext

03/11/2026 08:50 pm

Cinque Terre

4.88 K

Cinque Terre

0

ಸಂಬಂಧಿತ ಸುದ್ದಿ