ಬ್ರಹ್ಮಾವರ: ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಇದರ 20ನೇ ವರ್ಷದ ಸವಿನೆನಪಿನ ಅಂಗವಾಗಿ ರಾಜೇಶ್ ಎನ್. ಆಚಾರ್ಯ ಹಾಗೂ ರಾಘವೇಂದ್ರ ಆಚಾರ್ಯ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 'ಮಾಣಿಕ್ಯ ಪ್ರೀಮಿಯರ್ ಲೀಗ್ 2026' ಹಾಗೂ 'ವಿಶ್ವಕರ್ಮ ಟ್ರೋಫಿ' ಕ್ರಿಕೆಟ್ ಪಂದ್ಯಾಕೂಟವು ಯಶಸ್ವಿಯಾಗಿ ಮುಕ್ತಾಯಗೊಂಡಿತು. 60 ಗಜಗಳ ಸೀಮಿತ ಓವರ್ಗಳ 3 ದಿನಗಳ ಈ ಹಗಲು ಪಂದ್ಯಾಕೂಟವು ಎರಡು ಕ್ರೀಡಾಂಗಣಗಳಲ್ಲಿ ನಡೆಯಿತು.
ರಾಜ್ಯಮಟ್ಟದಲ್ಲಿ ಜರುಗಿದ ಈ ಕ್ರಿಕೆಟ್ ಕ್ರೀಡಾಕೂಟದಲ್ಲಿ ನಾಡಿನ ವಿವಿಧ ಭಾಗಗಳ 30 ಬಲಿಷ್ಠ ತಂಡಗಳು ಭಾಗವಹಿಸಿದ್ದವು. ರೋಚಕವಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಕುಂದಾಪುರದ 'ರತನ್ ರಾಕರ್ಸ್' ತಂಡವನ್ನು ಮಣಿಸಿದ 'ಎಂಜಾಯ್ ಫ್ರೆಂಡ್ಸ್ ನೀಲಾವರ' ತಂಡವು ಪ್ರಥಮ ಸ್ಥಾನ ಪಡೆದು ₹2,22,222 ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನ ಪಡೆದ ಕುಂದಾಪುರದ 'ರತನ್ ರಾಕರ್ಸ್' ತಂಡವು ₹1,11,111 ನಗದು ಹಾಗೂ ಟ್ರೋಫಿ ಪಡೆಯಿತು. ಅಂತೆಯೇ ಹೇರೂರಿನ 'ಶ್ರೀ ಮಾತಾ' ತಂಡವು ತೃತೀಯ ಸ್ಥಾನ ಗಳಿಸಿ ₹55,000 ಹಾಗೂ ಕೋಟೇಶ್ವರದ 'ಸಾಂಚಿ - ಬಾಲಾಜಿ' ತಂಡವು ನಾಲ್ಕನೇ ಸ್ಥಾನ ಪಡೆದು ₹55,000 ನಗದು ಪುರಸ್ಕಾರದೊಂದಿಗೆ ಟ್ರೋಫಿ ಪಡೆದುಕೊಂಡವು.
ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಸಮಾಜಮುಖಿ ಕಾರ್ಯಕ್ರಮಗಳು: ಇದೇ ಸಂದರ್ಭದಲ್ಲಿ ಅಶಕ್ತರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡುತ್ತಿರುವ ಸಮಾನಮನಸ್ಕರ ತಂಡದ ಮುಖ್ಯಸ್ಥ ಶಶಿಧರ ಪುರೋಹಿತ್ ಕಟಪಾಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜೊತೆಗೆ ಸ್ಥಳೀಯ ಯುವ ಕ್ರೀಡಾಪಟುಗಳನ್ನು ಗೌರವಿಸಲಾಯಿತು. ಮಾಣಿಕ್ಯ ಕ್ರಿಕೆಟರ್ಸ್ ತಂಡದ ವತಿಯಿಂದ ಬ್ರಹ್ಮಾವರ ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್ಗಳನ್ನು ಹಸ್ತಾಂತರಿಸಲಾಯಿತು.
ತಂಡದ ಪ್ರಮುಖ ಆಟಗಾರ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರದೀಪ್ ಆಚಾರ್ಯ ಅವರ ಸ್ಮರಣಾರ್ಥ ಈ ಪಂದ್ಯಾಕೂಟವನ್ನು ಆಯೋಜಿಸಲಾಗಿದ್ದು, ಪಂದ್ಯಾಕೂಟದಿಂದ ಉಳಿದ ಸಂಪೂರ್ಣ ಮೊತ್ತವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಆಯೋಜಕರು ತಿಳಿಸಿದರು.
PublicNext
03/11/2026 07:40 pm