ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಮತ್ಸ್ಯ ವಾಹಿನಿ ಕ್ಯಾಂಟೀನ್‌ಗೆ ಒಲಿದ ‘ಕೌಶಲ್ಯ ಕರ್ನಾಟಕ - 2026’ ಪ್ರಶಸ್ತಿ

ಮಂಡ್ಯ, ನವೆಂಬರ್ 03: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ (Sanjeevini-NRLM), ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಂಡ್ಯ ಜಿಲ್ಲೆಯ ಕೆರಗೋಡು ಸಂಜೀವಿನಿ ಒಕ್ಕೂಟದ ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘಕ್ಕೆ 2026ನೇ ಸಾಲಿನ ಪ್ರತಿಷ್ಠಿತ 'ಕೌಶಲ್ಯ ಕರ್ನಾಟಕ' ಪ್ರಶಸ್ತಿ ಘೋಷಣೆಯಾಗಿದೆ.

ರಾಜ್ಯದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕೃಷಿಯೇತರ ಜೀವನೋಪಾಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ರಾಜ್ಯದ ಒಟ್ಟು 8 ಸ್ವ-ಸಹಾಯ ಗುಂಪುಗಳನ್ನು ಈ ಗೌರವಕ್ಕೆ ಆಯ್ಕೆ ಮಾಡಿದ್ದು, ಅದರಲ್ಲಿ ಮಂಡ್ಯದ ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘವು ವು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಸ್ಫೂರ್ತಿದಾಯಕ ಯಶೋಗಾಥೆ: ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘವು ಕಳೆದ ಒಂದು ವರ್ಷದಿಂದ ಮಂಡ್ಯ ಜಿಲ್ಲಾ ಪಂಚಾಯತ್ ಕಚೇರಿಯ ಆವರಣದ ಪಕ್ಕದಲ್ಲಿ 'ಮತ್ಸ್ಯ ವಾಹಿನಿ - ಅಕ್ಕನ ಮನೆ ಮೀನೂಟ' ಮೊಬೈಲ್ ಕ್ಯಾಂಟೀನ್ ಅನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಮಹಿಳೆಯರ ಈ ಸ್ವಾವಲಂಬಿ ಉದ್ಯಮಶೀಲತೆ ಮತ್ತು ಶ್ರಮವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಇದು ಜಿಲ್ಲೆಯ ಹಾಗೂ ರಾಜ್ಯದ ಇತರ ಮಹಿಳಾ ಸ್ವ-ಸಹಾಯ ಸಂಘಗಳಿಗೆ ದೊಡ್ಡ ಪ್ರೇರಣೆಯಾಗಲಿದೆ.

ಮತ್ಸ್ಯ ವಾಹಿನಿ ಯೋಜನೆಗೆ ಸಂದ ಗೌರವ: ಮಂಡ್ಯ ಜಿಲ್ಲಾ ಪಂಚಾಯಿತಿಯು ಮೀನುಗಾರಿಕಾ ಇಲಾಖೆ ಮತ್ತು ಕರ್ನಾಟಕ ಮತ್ಸ್ಯ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಜಿಲ್ಲೆಯ ಒಟ್ಟು 11 ಮಹಿಳಾ ಸ್ವ-ಸಹಾಯ ಸಂಘಗಳಿಗೆ 'ಮತ್ಸ್ಯ ವಾಹಿನಿ - ಅಕ್ಕನ ಮನೆ ಮೀನೂಟ' ಮೊಬೈಲ್ ಕ್ಯಾಂಟೀನ್‌ಗಳನ್ನು ವಿತರಿಸಿತ್ತು. ಈ ಯೋಜನೆಗೆ ಈಗ ರಾಜ್ಯ ಮಟ್ಟದ ಮನ್ನಣೆ ದೊರೆತಂತಾಗಿದೆ.

ಸೂಕ್ತ ತರಬೇತಿ ಮತ್ತು ಮಾರುಕಟ್ಟೆ ಅವಕಾಶ: ಈ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸುವ ಮುನ್ನ ಆಯ್ಕೆಯಾದ ಮಹಿಳಾ ಸಂಘದ ಸದಸ್ಯರಿಗೆ ಹಲವಾರು ಸುತ್ತುಗಳ ವೃತ್ತಿಪರ ತರಬೇತಿಯನ್ನು ನೀಡಲಾಗಿತ್ತು. ತರಬೇತಿಯ ನಂತರ ಕೇವಲ ಒಂದೇ ಜಾಗಕ್ಕೆ ಸೀಮಿತವಾಗದೆ, ಜಿಲ್ಲೆಯ ಪ್ರಮುಖ ಕೃಷಿ ಮೇಳಗಳು ಹಾಗೂ ಫಲಪುಷ್ಪ ಪ್ರದರ್ಶನಗಳಂತಹ ಸಾರ್ವಜನಿಕ ಪ್ರದರ್ಶನಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತವು ಸೂಕ್ತ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿತ್ತು. ಸೃಜನಾತ್ಮಕ ಅವಕಾಶಗಳು ಮತ್ತು ಮಹಿಳೆಯರ ಕಠಿಣ ಪರಿಶ್ರಮದ ಫಲವಾಗಿ ಇಂದು ಮಂಡ್ಯದ ಮತ್ಸ್ಯ ವಾಹಿನಿ ಕ್ಯಾಂಟೀನ್‌ಗೆ ಈ ಉನ್ನತ ಪ್ರಶಸ್ತಿ ಒಲಿದುಬಂದಿದೆ.

ನವೆಂಬರ್ 5 ರಂದು ಪ್ರಶಸ್ತಿ ಪ್ರದಾನ: ಬೆಂಗಳೂರಿನ ಪ್ರತಿಷ್ಠಿತ ಅಶೋಕ ಹೋಟೆಲ್‌ನಲ್ಲಿ ನವೆಂಬರ್ 5 ರಂದು ಹಮ್ಮಿಕೊಳ್ಳಲಾಗಿರುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು. ಸದರಿ ಗೌರವಾನ್ವಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಮಂಡ್ಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ (CEO) ನಂದಿನಿ ಕೆ.ಆರ್., ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ ಹಾಗೂ ಪ್ರಶಸ್ತಿಗೆ ಭಾಜನವಾಗಿರುವ ಅರಸಮ್ಮ ಮಹಿಳಾ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಆಹ್ವಾನ ನೀಡಲಾಗಿದೆ.

Edited By :
Kshetra Samachara

Kshetra Samachara

03/11/2026 08:09 pm

Cinque Terre

320

Cinque Terre

0

ಸಂಬಂಧಿತ ಸುದ್ದಿ