ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ದಿನದಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರಾಳ ದಿನ ಆಚರಿಸಲು ಜಿಲ್ಲಾಡಳಿತ ಅವಕಾಶ ನೀಡಿರುವುದಕ್ಕೆ ಸಮಾನ ಮನಸ್ಕ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಸೋಮವಾರ ಸಂಜೆ ಕನ್ನಡ ಸಾಹಿತ್ಯ ಭವನದಲ್ಲಿ ಅಶೋಕ ಚಂದರಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಲಾಯಿತು.
ಅಕ್ಟೋಬರ್ 8ರಂದು ನಡೆದ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕರಾಳ ದಿನಾಚರಣೆಗೆ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿದ್ದರು. ಆದರೆ, ಇದಕ್ಕೆ ವಿರುದ್ಧವಾಗಿ ಜಿಲ್ಲಾಡಳಿತ ನಡೆದುಕೊಂಡಿದ್ದು, ಕನ್ನಡ ಸಂಘಟನೆಗಳಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಸಂಘಟನೆಗಳು ಹೋರಾಟ ನಡೆಸಿದಾಗ ಕಾರ್ಯಕರ್ತರನ್ನು ಬಂಧಿಸಲು ಮುಂದಾಗುವ ಪೊಲೀಸರು, ಎಂಇಎಸ್‌ಗೆ ಮೆರವಣಿಗೆ ನಡೆಸಲು ಅವಕಾಶ ನೀಡಿದ್ದಲ್ಲದೆ ಭದ್ರತೆಯನ್ನೂ ಒದಗಿಸಿದ್ದಾರೆ. ನಾಡದ್ರೋಹಿ ಸಂಘಟನೆಗೆ ಜಿಲ್ಲಾಡಳಿತ ಸಹಕಾರ ನೀಡಿರುವುದು ಖಂಡನೀಯ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇದೇ ವೇಳೆ ಗೋವಾದಲ್ಲಿ ಕಳೆದ ಒಂದು ತಿಂಗಳಿಂದ ಕನ್ನಡಿಗ ಲಾರಿ ಮಾಲೀಕರು ಹಾಗೂ ಚಾಲಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನೂ ಸಭೆ ತೀವ್ರವಾಗಿ ಖಂಡಿಸಿತು. ಕರ್ನಾಟಕ ಪ್ರವೇಶಿಸುವ ಗೋವಾ ನೋಂದಣಿಯ ಲಾರಿಗಳ ವಿರುದ್ಧ ಕನ್ನಡ ಸಂಘಟನೆಗಳು ಸೂಕ್ತ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಕೆ ನೀಡಲಾಯಿತು.
ಮುಂದಿನ ವರ್ಷ ಗೋವಾದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿರುವ ಸುಮಾರು ನಾಲ್ಕು ಲಕ್ಷ ಕನ್ನಡಿಗರ ಮತಗಳನ್ನು ಪಡೆಯಲು ತೆರಳುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕನ್ನಡಿಗರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಮೌನ ವಹಿಸದೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಭೆ ಆಗ್ರಹಿಸಿತು.
ಸಭೆಯಲ್ಲಿ ಬಲರಾಮ ಮಾಸೇನಟ್ಟಿ, ಮಲ್ಲಪ್ಪ ಗುಡಗೇನಟ್ಟಿ, ಸಾಗರ ಬೋರಗಲ್ಲ, ವಂದನಾ ಹೊರಕೇರಿ, ಸ್ಮಿತಾ ಪೂಜಾರಿ, ಆನಂದ ಬಿಲಾವರ ಹಾಗೂ ಎಚ್.ಐ. ತಿಮ್ಮಾಪುರ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
PublicNext
03/11/2026 09:20 pm
LOADING...