ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ನಡುವೆ ನಡೆದ ಸಭೆ ಯಾವುದೇ ಅಂತಿಮ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿದೆ. ಪ್ರತಿ ಟನ್ ಕಬ್ಬಿಗೆ ಮೊದಲ ಕಂತಾಗಿ ಹೆಚ್ಚುವರಿ 35 ರೂ. ನೀಡುವ ಪ್ರಸ್ತಾಪವನ್ನು ಕಾರ್ಖಾನೆ ಮಾಲೀಕರು ಮುಂದಿಟ್ಟಿದ್ದು, ಇದಕ್ಕೆ ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಚುನಪ್ಪ ಪುಜಾರಿ, ಕಾರ್ಖಾನೆ ಮಾಲೀಕರು ಪ್ರಸ್ತಾಪಿಸಿರುವ ದರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರೈತರಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ 4,000 ರೂ. ದರ ನೀಡಬೇಕು ಎಂದು ಒತ್ತಾಯಿಸಿದರು.
ಹೆಚ್ಚುವರಿ ಹಣವನ್ನು ಎಷ್ಟು ಕಂತುಗಳಲ್ಲಿ ಹಾಗೂ ಯಾವ ಸಮಯದಲ್ಲಿ ಪಾವತಿಸಲಾಗುತ್ತದೆ ಎಂಬುದನ್ನು ಕಾರ್ಖಾನೆ ಮಾಲೀಕರು ಸ್ಪಷ್ಟಪಡಿಸಬೇಕು. ಈ ಕುರಿತು ಲಿಖಿತ ಒಪ್ಪಂದ ಮಾಡಿಕೊಳ್ಳುವುದು ಅಗತ್ಯ ಎಂದು ಆಗ್ರಹಿಸಿದರು.
ಕಾರ್ಖಾನೆ ಮಾಲೀಕರು ಮೊದಲ ಕಂತಾಗಿ 35 ರೂ. ಹೆಚ್ಚುವರಿ ಹಣ ನೀಡಿ, ನಂತರ ಸಕ್ಕರೆ ಮಾರಾಟದ ದರವನ್ನು ಆಧರಿಸಿ ಮತ್ತಷ್ಟು ಹಣ ಪಾವತಿಸುವ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಅಂತಿಮವಾಗಿ ರೈತರಿಗೆ ಎಷ್ಟು ಹಣ ಸಿಗಲಿದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ನೀಡಿಲ್ಲ ಎಂದು ಚುನಪ್ಪ ಪುಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ಸಮಸ್ಯೆಯನ್ನು ತರಲಾಗಿದೆ. ಕಾರ್ಖಾನೆ ಮಾಲೀಕರೊಂದಿಗೆ ಮತ್ತೊಮ್ಮೆ ಚರ್ಚಿಸಿ ನಾಳೆಯೊಳಗೆ ಅಂತಿಮ ಪರಿಹಾರ ಘೋಷಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ನಾಳೆಯೊಳಗೆ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಬಡಕುಂದ್ರಿಯಿಂದ ಕಿತ್ತೂರು ಮಾರ್ಗವಾಗಿ ಬೆಳಗಾವಿಯವರೆಗೆ ಬೃಹತ್ ರೈತ ಪ್ರತಿಭಟನಾ ಯಾತ್ರೆ ನಡೆಸಲು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಎಲ್ಲ ರೈತ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿದ್ದು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ ಕಾರ್ಖಾನೆಗಳು ತಕ್ಷಣ ಕಾರ್ಯಾರಂಭ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
PublicNext
03/11/2026 10:07 pm
LOADING...