ತರೀಕೆರೆ: ಬಸ್‌ನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಹೋದ ಮೊಬೈಲ್ ಫೋನನ್ನು ದುರ್ಬಳಕೆ ಮಾಡಿಕೊಂಡ ಖದೀಮರು, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 1.68 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತರೀಕೆರೆಯ ನಿವಾಸಿ ಕೃಷ್ಣಮೂರ್ತಿ ಎಂಬುವವರೇ ಈ ಡಿಜಿಟಲ್ ವಂಚನೆಗೆ ಬಲಿಯಾದವರು.
ಇವರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಇದೇ ಮೊಬೈಲ್ ಪಡೆದುಕೊಂಡ ಅಪರಿಚಿತ ವಂಚಕರು, ಅದರಲ್ಲಿದ್ದ 'ಫೋನ್‌ಪೇ' ಆ್ಯಪ್ ಅನ್ನು ಭೇದಿಸಿದ್ದಾರೆ. ಕೃಷ್ಣಮೂರ್ತಿ ಅವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಕಳ್ಳರು, ಹಂತಹಂತವಾಗಿ ಒಟ್ಟು 1,68,000 ರೂ. ಹಣವನ್ನು ತಮ್ಮ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ.
ತಮ್ಮ ಕಷ್ಟದ ಹಣವೆಲ್ಲಾ ಕ್ಷಣಮಾತ್ರದಲ್ಲಿ ಬೇರೆಯವರ ಪಾಲಾಗಿರುವುದನ್ನು ಕಂಡು ಕಂಗಾಲಾದ ಕೃಷ್ಣಮೂರ್ತಿ ಅವರು, ಇದೀಗ ನ್ಯಾಯ ಕೋರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ವಂಚಕರನ್ನು ಶೀಘ್ರವಾಗಿ ಪತ್ತೆಹಚ್ಚಿ ತಮ್ಮ ಹಣವನ್ನು ಮರಳಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದು, ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
03/11/2026 10:22 pm
LOADING...