ಮೂಡಿಗೆರೆ : ಯುವಕನೊಬ್ಬನನ್ನು ಆತನ ಸ್ನೇಹಿತರೇ ಬಲವಂತವಾಗಿ ಅಪಹರಿಸಿ, ಹಲ್ಲೆ ನಡೆಸಿ ಏರ್ ಗನ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಭೀಕರ ಘಟನೆ ಮೂಡಿಗೆರೆ ತಾಲೂಕಿನ ಗೌರಿಕೆರೆ ಗ್ರಾಮದ ನಂದೀಪುರದಲ್ಲಿ ನಡೆದಿದೆ. ನವೀನ್ ಎಂಬ ಯುವಕನೇ ತನ್ನ ಸ್ನೇಹಿತರ ವಂಚನೆಗೆ ಬಲಿಯಾದ ದುರ್ದೈವಿ.
ಅಕ್ಟೋಬರ್ 28ರಂದು ನವೀನ್‌ಗೆ ದನ ಗುದ್ದಿ ಗಾಯವಾಗಿದೆ ಎಂದು ಕಟ್ಟುಕತೆ ಕಟ್ಟಿದ್ದ ಆತನ ಸ್ನೇಹಿತರು, ಆತನನ್ನು ಆಸ್ಪತ್ರೆಗೆ ದಾಖಲಿಸಿ ನಾಟಕವಾಡಿದ್ದರು. ಆದರೆ, ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದ ನವೀನ್, ತನ್ನ ತಂದೆಯ ಬಳಿ ಅಸಲಿ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ತನ್ನ ಸ್ನೇಹಿತರಾದ ಚೇತನ್, ಭರತ್, ಪ್ರೀತಂ ಮತ್ತು ಆನಂದ್ ಎಂಬುವವರೇ ತನ್ನನ್ನು ಬಲವಂತವಾಗಿ ಕರೆದೊಯ್ದು ಮೊದಲು ಮನಬಂದಂತೆ ಹಲ್ಲೆ ನಡೆಸಿ, ಬಳಿಕ ಏರ್ ಗನ್‌ನಿಂದ ಶೂಟ್ ಮಾಡಿದ್ದಾರೆ ಎಂದು ಹೇಳಿದ್ದಾನೆ.
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ನವೀನ್, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ತನ್ನ ಮಗನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು, ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮೃತ ನವೀನ್ ತಂದೆ ಕುಮಾರ್ ಅವರು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
04/11/2026 09:09 pm
LOADING...