ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಸ್ಕಾಟ್‌ಲ್ಯಾಂಡ್‌ನಿಂದ ಬೆಲೆಬಾಳುವ ಕಾಸ್ಮೆಟಿಕ್ಸ್ ಗಿಫ್ಟ್ ಆಸೆಗೆ 2 ಲಕ್ಷ ರೂ. ಕಳೆದುಕೊಂಡ ದಂಪತಿ

ಚಿಕ್ಕಮಗಳೂರು : ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ ಸ್ಕಾಟ್‌ಲ್ಯಾಂಡ್‌ನಿಂದ ಬೆಲೆಬಾಳುವ ಕಾಸ್ಮೆಟಿಕ್ಸ್ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಮಹಿಳೆಯ ಫೇಸ್‌ಬುಕ್ ಖಾತೆಗೆ ಎರಡು ತಿಂಗಳ ಹಿಂದೆ 'mailwillam john' ಎಂಬ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ತಾನು ಸ್ಕಾಟ್‌ಲ್ಯಾಂಡ್ ನಿವಾಸಿ ಎಂದು ಪರಿಚಯಿಸಿಕೊಂಡಿದ್ದ ಆತ, ಮೆಸೆಂಜರ್ ಮೂಲಕ ನಿರಂತರವಾಗಿ ಚಾಟ್ ಮಾಡಿ ವಿಶ್ವಾಸ ಗಳಿಸಿದ್ದನು. ನಂತರ ಆಫರ್‌ನಲ್ಲಿ ಸಿಗುವ ಕಾಸ್ಮೆಟಿಕ್ಸ್ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ನಂಬಿಸಿ ಮನೆಯ ವಿಳಾಸವನ್ನು ಪಡೆದುಕೊಂಡಿದ್ದನು.

ಅಕ್ಟೋಬರ್ 29ರಂದು ಅನಾಮಧೇಯ ಸಂಖ್ಯೆಯಿಂದ ಕರೆ ಮಾಡಿದ ಮಹಿಳೆಯೊಬ್ಬಳು, ದೆಹಲಿ ಏರ್‌ಪೋರ್ಟ್‌ಗೆ ನಿಮ್ಮ ಗಿಫ್ಟ್ ಪಾರ್ಸೆಲ್ ಬಂದಿದ್ದು, ಕೊರಿಯರ್ ಚಾರ್ಜ್ ಪಾವತಿಸುವಂತೆ ಸೂಚಿಸಿದ್ದಳು. ಇದನ್ನು ನಿಜವೆಂದು ನಂಬಿದ ದಂಪತಿ, ಅವರು ಸೂಚಿಸಿದ ನಂಬರ್‌ಗೆ ಫೋನ್‌ಪೇ ಮೂಲಕ 35,000 ರೂ. ಕಳುಹಿಸಿದ್ದರು. ತರುವಾಯ, ನಿಮ್ಮ ಗಿಫ್ಟ್ ಬಾಕ್ಸ್‌ನಲ್ಲಿ 80 ಪೌಂಡ್ಸ್ ವಿದೇಶಿ ಹಣವಿದ್ದು, ಅದನ್ನು ಪಡೆಯಲು ಜಿಎಸ್‌ಟಿ ಕಟ್ಟಬೇಕು ಎಂದು ಹೇಳಿ ಮಿಜೋರಾಂ ಮೂಲದ ಬ್ಯಾಂಕ್ ಖಾತೆಯೊಂದಕ್ಕೆ ಆರ್‌ಟಿಜಿಎಸ್ ಮೂಲಕ 1,70,000 ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಒಟ್ಟು 2,05,000 ರೂ.ಗಳನ್ನು ಪಡೆದುಕೊಂಡ ನಂತರವೂ ವಂಚಕರು ಮತ್ತೆ ಕರೆ ಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ದಂಪತಿಗೆ ತಾವು ಮೋಸ ಹೋಗಿರುವುದು ಅರಿವಾಗಿದೆ. ಗಾಬರಿಗೊಂಡ ಅವರು ತಕ್ಷಣವೇ ಸ್ನೇಹಿತರ ಬಳಿ ವಿಚಾರಿಸಿ, ಸೈಬರ್ ಸಹಾಯವಾಣಿ 1930ಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಹಾಗೂ ಆಸೆ ಹುಟ್ಟಿಸುವ ವಿದೇಶಿ ಗಿಫ್ಟ್‌ಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.

Edited By : PublicNext Desk
Kshetra Samachara

Kshetra Samachara

04/11/2026 09:03 pm

Cinque Terre

7.18 K

Cinque Terre

0

ಸಂಬಂಧಿತ ಸುದ್ದಿ