ಹುಬ್ಬಳ್ಳಿ : ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ತಗ್ಗು-ಗುಂಡಿಯಿಂದಾಗಿ ಬೈಕ್ ಸವಾರನೊಬ್ಬ ಚಿಗರಿ ಬಸ್ನ ಚಕ್ರದಡಿ ಸಿಲುಕುವ ಭೀಕರ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ಪ್ರಾಣಾಪಾಯದಿಂದ ಪಾರಾದ ಅವರು ತಕ್ಷಣವೇ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ.
ಹೌದು, ಭೀಮಣ್ಣ ಎಂಬುವವರು ಬೈಕ್ನಲ್ಲಿ ಸಿಬಿಟಿ ಕಡೆಗೆ ತೆರಳುತ್ತಿದ್ದಾಗ ರಸ್ತೆ ಗುಂಡಿಯಿಂದ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲೇ ಬಿದ್ದಿದ್ದಾರೆ. ಇದೇ ವೇಳೆ ಹಿಂಬದಿಯಿಂದ ಚಿಗರಿ ಬಸ್ ಬರುತ್ತಿದ್ದು, ಕ್ಷಣಮಾತ್ರ ತಡವಾಗಿದ್ದರೂ ಬಸ್ನ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ತಮ್ಮ ಜೀವ ಉಳಿದ ಖುಷಿಯಲ್ಲೇ ಸುಮ್ಮನಾಗದ ಭೀಮಣ್ಣ, ಇದೇ ಗುಂಡಿಯಿಂದ ಮತ್ತೊಬ್ಬರ ಜೀವಕ್ಕೆ ಅಪಾಯವಾಗಬಾರದು ಎಂದು ನಿರ್ಧರಿಸಿ, ಸ್ವಂತ ಹಣ ಖರ್ಚು ಮಾಡಿ ರಸ್ತೆಯ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸ್ಥಳದಲ್ಲಿದ್ದ ಸಂಚಾರಿ ಪೊಲೀಸರೂ ಅವರಿಗೆ ಸಹಕಾರ ನೀಡಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಓರ್ವ ಸಾಮಾನ್ಯ ನಾಗರಿಕ ತನ್ನ ಹಣದಿಂದ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಹುಬ್ಬಳ್ಳಿ-ಧಾರವಾಡದ ರಸ್ತೆ ಗುಂಡಿಗಳನ್ನು ಮುಚ್ಚಿ, ಮತ್ತೊಂದು ಅಮಾಯಕ ಜೀವ ಬಲಿಯಾಗುವ ಮುನ್ನ ಎಚ್ಚರ ವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/11/2026 11:15 am
LOADING...