ಸಾಗರ:ಶಿವಮೊಗ್ಗದಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಕಲ್ಲೂರು ಮೇಘರಾಜ್ ನೀಡಿರುವ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಕೀಳುಮಟ್ಟದ ಭಾಷೆಯನ್ನು ಬಳಸಿ ಮಾತನಾಡಿರುವುದು ಅತ್ಯಂತ ಖಂಡನೀಯ ಮತ್ತು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಸಾಗರದ ಯುವ ಮುಖಂಡ ಹಾಗೂ ಕಾಗೋಡು ತಿಮ್ಮಪ್ಪ ಅವರ ಅಪ್ಪಟ ಅಭಿಮಾನಿ ತಾರಾ ಮೂರ್ತಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲೂರು ಮೇಘರಾಜ್ ಅವರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬೇಕಿತ್ತಾ ಎಂಬ ಅಪ್ರಸ್ತುತ ಹಾಗೂ ಹಗುರವಾದ ಮಾತನ್ನಾಡಿದ್ದಾರೆ. ಆದರೆ ಕಾಗೋಡು ತಿಮ್ಮಪ್ಪ ಅವರು ಯಾವುದೇ ಪ್ರಶಸ್ತಿಗಾಗಿ ಅರ್ಜಿ ಹಾಕಿ ಪಡೆದವರಲ್ಲ, ಬದಲಾಗಿ ಸರ್ಕಾರವೇ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಇಂತಹ ಹಿರಿಯ ನಾಯಕನ ವ್ಯಕ್ತಿತ್ವವನ್ನು ಟೀಕಿಸುವ ಭರದಲ್ಲಿ ಮೇಘರಾಜ್ ಮಿತಿಯನ್ನು ಮೀರಿದ್ದಾರೆ ಎಂದು ತಾರಾ ಮೂರ್ತಿ ಕಿಡಿಕಾರಿದ್ದಾರೆ.
ಕಾಗೋಡು ತಿಮ್ಮಪ್ಪ ಅವರ ರಾಜಕೀಯ ಹಾಗೂ ಸಾರ್ವಜನಿಕ ಬದುಕು ಇಡೀ ಕರ್ನಾಟಕಕ್ಕೆ ಚಿರಪರಿಚಿತವಾಗಿದೆ. ಅಂತಹ ಧೀಮಂತ ನಾಯಕನ ವಿರುದ್ಧ ಹಣೆಬರಹದ ಮಾತುಗಳನ್ನಾಡಿರುವುದು ಅಕ್ಷಮ್ಯ ಅಪರಾಧ. ಕಲ್ಲೂರು ಮೇಘರಾಜ್ ಕೂಡಲೇ ತಮ್ಮ ಹೇಳಿಕೆಗೆ ಬೇಷರತ್ತಾಗಿ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ವಿವಾದವು ಸಾಗರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಕಾಗೋಡು ತಿಮ್ಮಪ್ಪ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಮೇಘರಾಜ್ ಅವರ ವರ್ತನೆಯನ್ನು ಖಂಡಿಸುತ್ತಿದ್ದಾರೆ. ಕಲ್ಲೂರು ಮೇಘರಾಜ್ ಅವರು ನೇರವಾಗಿ ಕಾಗೋಡು ತಿಮ್ಮಪ್ಪ ಅವರ ಮನೆಗೆ ತೆರಳಿ ಕ್ಷಮೆ ಕೋರದಿದ್ದರೆ ಹೋರಾಟವನ್ನು ಉಲ್ಬಣಗೊಳಿಸಲಾಗುವುದು ಎಂದು ತಾರಾ ಮೂರ್ತಿ ಪುನರುಚ್ಚರಿಸಿದ್ದಾರೆ.
ಜಮೀಲ್ ಸಾಗರ್ "ಪಬ್ಲಿಕ್ ನೆಕ್ಸ್ಟ್ ಸಾಗರ"
Kshetra Samachara
04/11/2026 03:34 pm
LOADING...