ಶಿವಮೊಗ್ಗ : ಶಿವಮೊಗ್ಗ ನಗರದ ಜಯನಗರದ 2ನೇ ಕ್ರಾಸ್‌ನಲ್ಲಿರುವ ‘ನಾವುಕಿಸ್ ಕಿಂಡರ್ ಕೇರ್’ ಶಾಲಾ ಕಟ್ಟಡದ ಮೇಲ್ಭಾಗದಲ್ಲಿ, ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಕ್ರಮವಾಗಿ ಬೃಹತ್ ಪ್ರಮಾಣದ ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು. ಶಾಲೆಯಲ್ಲಿ ಕಲಿಯುವ ಮುದ್ದು ಮಕ್ಕಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಕೃತ್ಯದ ಬಗ್ಗೆ ಖಚಿತ ಮಾಹಿತಿ ಪಡೆದ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು ದಿಢೀರ್ ದಾಳಿ ನಡೆಸಿ, ಅಂದಾಜು ಎರಡು ಲಕ್ಷ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಜಯನಗರದ ಶಾಲಾ ಕಟ್ಟಡವೊಂದರಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ, ಎಸಿ ಡಾ.ಮೈತ್ರಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡ್ಸ್ ಶಾಲೆಯ ಮೇಲ್ಭಾಗದಲ್ಲೇ ಅಮರ್ ಎಂಬ ವ್ಯಕ್ತಿ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಪಟಾಕಿಗಳನ್ನು ಅಕ್ರಮವಾಗಿ ಶೇಖರಿಸಿಟ್ಟಿರುವುದು ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳ ಅನಿರೀಕ್ಷಿತ ದಾಳಿಯನ್ನು ಕಂಡು ಬೆಚ್ಚಿಬಿದ್ದ ಅಕ್ರಮಕೋರರು ಕಂಗಾಲಾಗಿದ್ದಾರೆ.
ಶಾಲೆಯ ಆವರಣದಲ್ಲೇ ಪಟಾಕಿ ಗೋದಾಮು ಇರುವುದು ತಿಳಿದು ಸ್ಥಳೀಯರು ಮತ್ತು ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ, ಮುಗ್ಧ ಮಕ್ಕಳ ಜೀವದೊಂದಿಗೆ ಆಟವಾಡಿದ ಆರೋಪಿ ಅಮರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಬಲವಾಗಿ ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಮಾಲೀಕ ಅಮರ್, ಸಾರಿ ತಪ್ಪಾಯ್ತು' ಎಂದು ಅಧಿಕಾರಿಗಳ ಮುಂದೆ ಕ್ಷಮೆಯಾಚಿಸಲು ಮುಂದಾಗಿದ್ದಾನೆ. ಆದರೆ, ಎಸಿ ಡಾ. ಮೈತ್ರಿ ಅವರು ಮಾಲೀಕನಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಕೂಡಲೇ ನೋಟಿಸ್ ಜಾರಿ ಮಾಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಂತಹ ಜನನಿಬಿಡ ಮತ್ತು ಮಕ್ಕಳಿರುವ ಶೈಕ್ಷಣಿಕ ವಲಯಗಳಲ್ಲಿ ಈ ರೀತಿಯ ಅಪಾಯಕಾರಿ ಸ್ಫೋಟಕ ವಸ್ತುಗಳ ಅಕ್ರಮ ದಾಸ್ತಾನು ಮುಂದುವರಿದರೆ ದೊಡ್ಡ ಮಟ್ಟದ ದುರಂತ ಸಂಭವಿಸುವ ಆತಂಕವಿದೆ. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ ಇಂತಹ ಬೇಜವಾಬ್ದಾರಿ ವ್ಯಕ್ತಿಗಳ ವಿರುದ್ಧ ಕೇವಲ ನೋಟಿಸ್‌ಗೆ ಸೀಮಿತವಾಗದೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರ ಪ್ರಮುಖ ಒತ್ತಾಯವಾಗಿದೆ.
PublicNext
05/11/2026 12:05 pm