ಸಾಗರ: ತಾಲೂಕಿನ ದಿಗಂಬರ ಜೈನ್ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜೈನ ಅಭಿವೃದ್ಧಿ ನಿಗಮ ಮಂಡಳಿಯನ್ನು ಕೂಡಲೇ ರಚಿಸಬೇಕೆಂದು ಆಗ್ರಹಿಸಿ, ಉಪ ವಿಭಾಗಾಧಿಕಾರಿಗಳ ಕಚೇರಿಯ ಎದುರು ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯ ಬಳಿಕ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಪ್ರತಿಭಟನಾ ಸಭೆಯಲ್ಲಿ ಜೈನ್ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಹಿತಕರ್ ಜೈನ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಜೈನ ಸಮುದಾಯವು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದೆ ಎಂದು ತಿಳಿಸಿದರು. ಸಮಸ್ತ ಜೈನ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಮತ್ತು ಸಮಾಜವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರದ ವತಿಯಿಂದ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರಸಂತ ಆಚಾರ್ಯ 108 ಶ್ರೀ ಗುಣಧರನಂದಿ ಮುನಿಮಹಾರಾಜರ ಆಶಯದಂತೆ ಹಾಗೂ ತೀರ್ಥಕ್ಷೇತ್ರಗಳ ಸಂರಕ್ಷಣೆ, ಜೈನ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಮತ್ತು ವಿದೇಶಿ ವಾಣಿಜ್ಯ ವ್ಯವಹಾರದಲ್ಲಿ ಖ್ಯಾತಿ ಗಳಿಸಿದ ರಾಣಿ ಚೆನ್ನಭೈರಾದೇವಿ ದಿನಾಚರಣೆ ಜಾರಿಗೆ ತರುವುದು ಸೇರಿದಂತೆ ವಿವಿಧ ಪ್ರಮುಖ 9 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
ಈ ಸಂದರ್ಭದಲ್ಲಿ ವೀರರಾಣಿ ಚೆನ್ನಭೈರಾದೇವಿ ಜಿಲ್ಲಾ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಜ್ಯೋತಿ ನೇಮರಾಜ್ ಸೇರಿದಂತೆ ಸಮುದಾಯದ ಅನೇಕ ಪ್ರಮುಖರು ಉಪಸ್ಥಿತರಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಜೈನ ಮುನಿಗಳ ಮತ್ತು ಭಟ್ಟಾರಕರ ಆಶಯದಂತೆ ಈ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಜಮೀಲ್ ಸಾಗರ್, ಪಬ್ಲಿಕ್ ನೆಕ್ಸ್ಟ್ ಸಾಗರ
Kshetra Samachara
04/11/2026 05:09 pm
LOADING...