ಶಿವಮೊಗ್ಗ : ಫೇಶಿಯಲ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ಹೋದ ಮಹಿಳೆಯೊಬ್ಬರ ಬಂಗಾರವೇ ಕಾಯಂ ಲಾಕರ್‌ನಲ್ಲಿ ಸುರಕ್ಷಿತವಾಗಿದೆ ಎಂದಿಟ್ಟ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಅಕ್ಷತಾ ಎಂಬುವವರು ಅಕ್ಟೋಬರ್ 19 ರಂದು ತಮ್ಮ ಪತಿಯೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದು, ನಗರದ ಬ್ಯೂಟಿ ಪಾರ್ಲರ್ ಒಂದರಲ್ಲಿ ಫೇಶಿಯಲ್ ಮಾಡಿಸಿಕೊಳ್ಳಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಫೇಶಿಯಲ್ ಮಾಡುವ ಮುನ್ನ ತಾವು ಧರಿಸಿದ್ದ ಒಡವೆಗಳನ್ನು ಹೊರಗಡೆ ಕುಳಿತಿದ್ದ ಪತಿಗೆ ನೀಡಲು ಅಕ್ಷತಾ ಮುಂದಾಗಿದ್ದರು. ಆದರೆ, ಪಾರ್ಲರ್ ಸಿಬ್ಬಂದಿ ನಮ್ಮಲ್ಲಿಯೇ ಲಾಕರ್ ವ್ಯವಸ್ಥೆ ಇದೆ, ಬಾಕ್ಸ್‌ನಲ್ಲಿ ಇರಿಸಿ ಲಾಕರ್ ಬೀಗ ಹಾಕಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಸಿಬ್ಬಂದಿಯ ಮಾತನ್ನು ನಂಬಿ ಅಕ್ಷತಾ ತಮ್ಮ ಒಡವೆಗಳನ್ನು ಲಾಕರ್‌ನಲ್ಲಿಟ್ಟಿದ್ದರು. ಆದರೆ, ಫೇಶಿಯಲ್ ಮುಗಿಸಿ ಬಂದು ನೋಡಿದಾಗ ಲಾಕರ್ ಓಪನ್ ಆಗಿದ್ದು, ಒಳಗಿದ್ದ ಬಂಗಾರ ಮಾಯವಾಗಿತ್ತು.
43 ಗ್ರಾಂ ತೂಕದ ಮಾಂಗಲ್ಯ ಸರ, 4.5 ಗ್ರಾಂ ತೂಕದ ಡೈಮಂಡ್ ರಿಂಗ್, ಬಂಗಾರದ ಉಂಗುರಗಳು ಹಾಗೂ ಓಲೆಗಳು ಸೇರಿದಂತೆ ಒಟ್ಟು 67 ಗ್ರಾಂ ತೂಕದ, ಅಂದಾಜು 9.21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ನಡೆದ ಬಳಿಕ ಪಾರ್ಲರ್ ಸಿಬ್ಬಂದಿ, ವಿಚಾರಿಸಿ ಒಡವೆಗಳನ್ನು ವಾಪಸ್ ಕೊಡುವುದಾಗಿ ಹೇಳಿ ಕಾಲಹರಣ ಮಾಡಿದ್ದರಂತೆ. ಕೊನೆಗೆ ಮೋಸಹೋಗಿರುವುದನ್ನು ಅರಿತ ಸಂತ್ರಸ್ತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬ್ಯೂಟಿ ಪಾರ್ಲರ್ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ.
Kshetra Samachara
04/11/2026 07:16 pm
LOADING...