ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಬೈನಿಂದ ಕಡಿಮೆ ದರದಲ್ಲಿ ಮೊಬೈಲ್ ಪೂರೈಸುವ ಆಮಿಷ, ಶಿವಮೊಗ್ಗದ ವ್ಯಾಪಾರಿಗೆ 2.79 ಲಕ್ಷ ವಂಚನೆ

​ಶಿವಮೊಗ್ಗ : ಇನ್‌ಸ್ಟಾಗ್ರಾಮ್‌ನಲ್ಲಿ ಕಡಿಮೆ ಬೆಲೆಗೆ ಮೊಬೈಲ್ ಹಾಗೂ ಆಕ್ಸೆಸರೀಸ್‌ಗಳನ್ನು ಪೂರೈಸುವುದು ಮತ್ತು ಡೀಲರ್‌ಶಿಪ್ ನೀಡುವುದಾಗಿ ನಂಬಿಸಿ, ಶಿವಮೊಗ್ಗದ ವ್ಯಾಪಾರಿಯೊಬ್ಬರಿಗೆ ಹಂತ ಹಂತವಾಗಿ ಒಟ್ಟು 2,79,000 ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕೀಪ್ಯಾಡ್ ಹಾಗೂ ಸ್ಮಾರ್ಟ್‌ಫೋನ್‌ಗಳ ಮಾರಾಟಕ್ಕಾಗಿ ಡೀಲರ್‌ಶಿಪ್ ನೀಡುವ ಆಕರ್ಷಕ ಜಾಹೀರಾತನ್ನು ಶಿವಮೊಗ್ಗದ ವ್ಯಾಪಾರಿಯೊಬ್ಬರು ವೀಕ್ಷಿಸಿದ್ದರು. ಜಾಹೀರಾತಿಗೆ ಸ್ಪಂದಿಸಿ ಸಂಪರ್ಕಿಸಿದಾಗ, ತಾವು ದುಬೈನಿಂದ ಕರೆ ಮಾಡುತ್ತಿರುವುದಾಗಿ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದಾನೆ. ಬೆಂಗಳೂರು ಹಾಗೂ ಮುಂಬೈ ಮಾರುಕಟ್ಟೆಗಿಂತಲೂ ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಫೋನ್‌ಗಳನ್ನು ನೇರವಾಗಿ ಪೂರೈಸುವುದಾಗಿ ಆತ ನಂಬಿಸಿದ್ದಾನೆ.

​ಆರೋಪಿಯ ಮಾತನ್ನು ನಂಬಿದ ವ್ಯಾಪಾರಿ, ಜೂನ್ 4 ರಂದು ಫೋನ್ ಮೂಲಕ 25,000 ಮುಂಗಡ ಹಣವನ್ನು ವರ್ಗಾಯಿಸಿದ್ದಾರೆ. ಆ ಬಳಿಕ ಕಸ್ಟಮ್ಸ್ ಶುಲ್ಕ, ಸಾಗಾಣಿಕೆ ಮತ್ತು ಇತರ ವಿವಿಧ ನೆಪಗಳನ್ನು ಒಡ್ಡಿ, ಅಕ್ಟೋಬರ್ 9 ರವರೆಗೆ ಹಂತ ಹಂತವಾಗಿ ಒಟ್ಟು 2,79,000 ಹಣವನ್ನು ತನ್ನ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ.

​ಹಣ ಪಡೆದ ಬಳಿಕವೂ ಯಾವುದೇ ಮೊಬೈಲ್ ಅಥವಾ ಸಾಮಗ್ರಿಗಳನ್ನು ಕಳುಹಿಸಿಲ್ಲ. ವ್ಯಾಪಾರಿಯು ಆತನಿಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೊನೆಗೆ ತಾನು ಮೋಸ ಹೋಗಿರುವುದನ್ನು ಅರಿತ ವ್ಯಾಪಾರಿ, ಕೂಡಲೇ ಸೆನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

04/11/2026 07:09 pm

Cinque Terre

400

Cinque Terre

0

ಸಂಬಂಧಿತ ಸುದ್ದಿ