ಶಿವಮೊಗ್ಗ : ಅಕ್ರಮವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕವನ್ನು ಪರಿಶೀಲಿಸಲು ತೆರಳಿದ್ದ ಮೆಸ್ಕಾಂ ಜ್ಯೂನಿಯರ್ ಪವರ್‌ಮ್ಯಾನ್ ಮೇಲೆ ವ್ಯಕ್ತಿಯೊಬ್ಬ ಕಲ್ಲು, ದೊಣ್ಣೆಯಿಂದ ಹಲ್ಲೆ ನಡೆಸಿ, ಕೊಡಲಿಯಿಂದ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಗರದ ಸೋಮಿನಕೊಪ್ಪದಲ್ಲಿ ನಡೆದಿದೆ.
ಮೆಸ್ಕಾಂ ಸಿಬ್ಬಂದಿ ಮಂಜುನಾಥ್ ಕೆ.ಎಸ್. ಹಲ್ಲೆಗೊಳಗಾದ ಜ್ಯೂನಿಯರ್ ಪವರ್‌ಮ್ಯಾನ್. ಸೋಮಿನಕೊಪ್ಪದ ಭೋವಿ ಕಾಲೋನಿಯಲ್ಲಿ ವಿದ್ಯುತ್ ಬಿಲ್ ಬಾಕಿ ಇರುವ ಸ್ಥಾವರಗಳ ಪರಿಶೀಲನೆಗಾಗಿ ಮಂಜುನಾಥ್ ತೆರಳಿದ್ದರು. ಈ ವೇಳೆ ಕಳೆದ 3 ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಮನೆಯೊಂದರ ಪರಿಶೀಲನೆ ನಡೆಸಿದಾಗ, ಆ ಮನೆಯವರು ಪಕ್ಕದ ಮನೆಯಿಂದ ಅಕ್ರಮವಾಗಿ ವೈರ್ ಮೂಲಕ ವಿದ್ಯುತ್ ಪಡೆದು ಬಳಸುತ್ತಿರುವುದು ಕಂಡುಬಂದಿತ್ತು.
ಇದನ್ನು ಪ್ರಶ್ನಿಸಿದ ಮಂಜುನಾಥ್ ಅವರ ಮೇಲೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣೆಗೆ ಕಲ್ಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ. ಅಷ್ಟೇ ಅಲ್ಲದೆ, ಅವರ ಸಮವಸ್ತ್ರ ಹರಿದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಸ್ಥಳೀಯರು ರಕ್ಷಣೆಗೆ ಬಂದಾಗ ಆತ ಕೊಡಲಿ ಹಿಡಿದು ದಾಳಿಗೆ ಯತ್ನಿಸಿ, ಜೀವಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ಮಂಜುನಾಥ್ ಅವರಿಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Kshetra Samachara
04/11/2026 07:11 pm
LOADING...