ದೊಡ್ಡಬಳ್ಳಾಪುರ: ಅಂಗಡಿ ಮುಂದೆ ಪಾರ್ಕ್ ಮಾಡಿ ಮನೆಯಲ್ಲಿ ಮಲಗಿ ಬೆಳಗ್ಗೆ ಬರುವಷ್ಟರಲ್ಲಿ ಗಾಡಿಯನ್ನ ಕಳವು ಮಾಡಲಾಗಿದೆ. ಗಾಡಿಯಲ್ಲಿ 5 ಲಕ್ಷ ಮೌಲ್ಯದ ದಿನಸಿ ಸಾಮಾನುಗಳಿದ್ದವು. ಗಾಡಿಯನ್ನ ನಂಬಿ ಜೀವನ ನಡೆಸುತ್ತಿದ್ದ ಯುವಕ ಕಳ್ಳರ ಕೃತ್ಯದಿಂದಾಗಿ ಬೀದಿಗೆ ಬರುವಂತಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಕೋಡಿಗೆಹಳ್ಳಿ ನಿವಾಸಿ ಚೇತನ್ ಕುಮಾರ್ ರವರ ಅಶೋಕ್ ಲೇಲ್ಯಾಂಡ್ ಗಾಡಿಯನ್ನ ಪಾರ್ಕ್ ಮಾಡಿದ ಸ್ಥಳದಿಂದ ಕಳವು ಮಾಡಲಾಗಿದೆ. ಗಾಡಿಯಲ್ಲಿ 5 ಲಕ್ಷ ಮೌಲ್ಯದ ದಿನಸಿ ಸಾಮಾನುಗಳು ಸೇರಿದಂತೆ ಸಾಲ ಮಾಡಿದ ಗಾಡಿ ಕಳ್ಳರ ಪಾಲಾಗಿದೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇತನ್ ಕುಮಾರ್ ಡ್ರೈವರ್ ಕೆಲಸ ಮಾಡುತ್ತಿದ್ದರು. ಕಷ್ಟಪಟ್ಟು ದುಡಿದ ಹಣದಲ್ಲಿ ಅಶೋಕ್ ಲೇಲ್ಯಾಂಡ್ ಗಾಡಿಯನ್ನ ಖರೀದಿ ಮಾಡಿದ್ದರು. ಯಶವಂತಪುರ ಮತ್ತು ತುಮಕೂರು ಎಪಿಎಂಸಿ ಮಾರುಕಟ್ಟೆಯಿಂದ ದಿನಸಿ ಖರೀದಿ ಮಾಡಿ ದೊಡ್ಡಬಳ್ಳಾಪುರದ ಅಂಗಡಿಗಳಿಗೆ ಸರಬರಾಜು ಕೆಲಸ ಮಾಡುತ್ತಿದ್ದರು.
ಅಕ್ಟೋಬರ್ 29ರಂದು ಯಶವಂತಪುರ ಎಪಿಎಂಸಿ ಮಾರುಕಟ್ಟೆಯಿಂದ ದಿನಸಿ ಖರೀದಿಸಿದ ಅವರು ದಿನಸಿ ತುಂಬಿದ ಗಾಡಿಯನ್ನ ರಾತ್ರಿ 9:30 ಸಮಯದಲ್ಲಿ ಕೋಡಿಗೆಹಳ್ಳಿಯ ಅರಸೇಗೌಡ ಕಾಂಪ್ಲೆಕ್ಸ್ ಮುಂದೆ ಪಾರ್ಕ್ ಮಾಡಿದ್ದರು. ರಾತ್ರಿ ಮನೆಯಲ್ಲಿ ಮಲಗಿ ಮರುದಿನ ಬೆಳಗ್ಗೆ 6:30 ರ ಸಮಯದಲ್ಲಿ ಬಂದು ನೋಡಿದಾಗ ಪಾರ್ಕ್ ಮಾಡಿದ ಗಾಡಿ ನಾಪತ್ತೆಯಾಗಿದೆ. ದಿನಸಿ ಸಮೇತ ಗಾಡಿಯನ್ನ ಕಳ್ಳರು ಕದ್ದೊಯ್ದಿದ್ದಾರೆ.
ಚೇತನ್ ಕುಮಾರ್ ಸಾಲ ಮಾಡಿ ಗಾಡಿ ಖರೀದಿ ಮಾಡಿದ್ದರು. ದಿನಸಿ ಸಾಮಾನುಗಳನ್ನ ಅಂಗಡಿಗಳಿಗೆ ಸರಬರಾಜು ಮಾಡುವ ಮೂಲಕ ಜೀವನ ಮಾಡುತ್ತಿದ್ದರು. ಗಾಡಿಯನ್ನ ನಂಬಿ ಜೀವನ ಮಾಡುತ್ತಿದ್ದ ಅವರ ಬದುಕನ್ನೇ ಕಳ್ಳರು ಬರ್ಬಾದು ಮಾಡಿದ್ದಾರೆ. ಗಾಡಿಯ ಸಾಲ, 5 ಲಕ್ಷ ಮೌಲ್ಯದ ದಿನಸಿ ಸಾಮಾನುಗಳು ಅವರ ಹೆಗಲಿಗೆ ಬಿದ್ದಿದೆ ಎಂದು ತಮ್ಮ ಅಸಹಾಯಕತೆಯನ್ನ ಮಾಧ್ಯಮದ ಮುಂದೆ ತೋಡಿಕೊಂಡರು.
PublicNext
05/11/2026 01:36 pm