ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತಿವೆ. ಕಳುವಾಗುತ್ತಿರುವ ದ್ವಿಚಕ್ರ ವಾಹನಗಳ ಪೈಕಿ ಪತ್ತೆಯಾಗುತ್ತಿರುವ ವಾಹನಗಳ ಸಂಖ್ಯೆ ತೀರಾ ಕಡಿಮೆಯಾಗಿರುವುದು ಅಂಕಿ ಅಂಶಗಳಲ್ಲಿ ತಿಳಿದು ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ದ್ವಿಚಕ್ರ ವಾಹನಗಳ ಕಳುವ ಪ್ರಕರಣಗಳಿಗೆ ಹೋಲಿಸಿದರೆ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಇತ್ತೀಚಿಗೆ ನಡೆದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪವಾದ ಅಂಕಿ ಅಂಶಗಳ ಮೂಲಕ ತಿಳಿದು ಬಂದಿದೆ. ಹಿಂದಿನ ಮೂರು ವರ್ಷಗಳಲ್ಲಿ 13,572 (2025ರ ಜೂನ್ 25ರವರೆಗಿನ ಅಂಕಿ ಅಂಶಗಳನ್ವಯ) ದ್ವಿಚಕ್ರ ವಾಹನಗಳು ಕಳ್ಳರ ಪಾಲಾಗಿದ್ದು, ಆ ಪೈಕಿ ಕೇವಲ 4605 ಪ್ರಕರಣಗಳಲ್ಲಿ ಮಾತ್ರವೇ ಕಳುವಾದ ದ್ವಿಚಕ್ರ ವಾಹನಗಳನ್ನ ಪತ್ತೆ ಹಚ್ಚಲಾಗಿದೆ.
ಮೂರು ವರ್ಷಗಳ ವಿವರ
2023
ದಾಖಲಾದ ಪ್ರಕರಣಗಳು - 5908
ಪತ್ತೆಯಾದ ಪ್ರಕರಣಗಳು - 2157
ಶೇಕಡಾವಾರು - 36.7%
2024
ದಾಖಲಾದ ಪ್ರಕರಣಗಳು - 5352
ಪತ್ತೆಯಾದ ಪ್ರಕರಣಗಳು - 1966
ಶೇಕಡಾವಾರು - 36.5%
2025 (ಜೂನ್ 25ರವರೆಗೆ)
ದಾಖಲಾದ ಪ್ರಕರಣಗಳು - 2134
ಪತ್ತೆಯಾಗಿರುವ ಪ್ರಕರಣಗಳು - 482
ಶೇಕಡಾವಾರು - 22.5%
ಎಲ್ಲೆಂದರಲ್ಲಿ ಅಥವಾ ರಸ್ತೆಯ ಬದಿ, ಬಸ್ ನಿಲ್ದಾಣ, ಪಾರ್ಕಿಂಗ್ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿರುವ ದ್ವಿಚಕ್ರ ವಾಹನಗಳನ್ನ ಕದಿಯುತ್ತಿರುವ ಕಳ್ಳರು ಅವುಗಳ ನಂಬರ್ ಪ್ಲೇಟ್, ಇಂಜಿನ್ ನಂಬರ್ ಬದಲಿಸಿ ಅನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಕದ್ದ ವಾಹನಗಳನ್ನ ಬಿಡಿ ಭಾಗಗಳನ್ನಾಗಿಸಿ ಮಾರಾಟ ಮಾಡುತ್ತಿರುವುದರಿಂದ ಪತ್ತೆ ಕಾರ್ಯ ಸವಾಲಾಗುತ್ತಿದೆ. ದ್ವಿಚಕ್ರ ವಾಹನಗಳನ್ನ ಖರೀದಿಸುವವರಿಗೆ ಜಿಪಿಎಸ್ ಅಳವಡಿಕೆ, ವೀಲ್ ಲಾಕಿಂಗ್ ಸಿಸ್ಟಂ, ಹ್ಯಾಂಡಲ್ ಲಾಕ್ ಅಳವಡಿಸಲು ಸಲಹೆ ನೀಡುವಂತೆ ಶೋರೂಮ್‌ಗಳ ಸಿಬ್ಬಂದಿಗೆ ಸೂಚಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಮಾಲೀಕರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೇನು?
ದ್ವಿಚಕ್ರ ವಾಹನಗಳ ಮಾಲೀಕರು ಮುನ್ನೆಚ್ಚರಿಕೆ ವಹಿಸದೆ ಎಲ್ಲೆಂದರಲ್ಲಿ ನಿಲ್ಲಿಸುವುದು, ವಾಹನದಲ್ಲಿ ಕೀ ಬಿಟ್ಟು ಹೋಗುವುದು, ಸುಲಭವಾಗಿ ಮುರಿಯಬಹುದಾದ ಹ್ಯಾಂಡಲ್ ಲಾಕ್ ಬಳಸುವುದು ಹಾಗೂ ಕತ್ತಲು ಪ್ರದೇಶಗಳಲ್ಲಿ ವಾಹನಗಳನ್ನ ನಿಲ್ಲಿಸುತ್ತಿರುವುದು ಬೈಕ್ ಕಳವು ಹೆಚ್ಚಾಗಲು ಕಾರಣವಾಗುತ್ತಿದೆ. ಸಾಧ್ಯವಾದಷ್ಟು ಸಿಸಿಟಿವಿ ನಿಗಾವಣೆಯಿರುವ ಸ್ಥಳಗಳಲ್ಲಿ ತಮ್ಮ ವಾಹನಗಳನ್ನ ನಿಲ್ಲಿಸಬೇಕು. ಕಳ್ಳರು ನಕಲಿ ಕೀ ಬಳಸಿದರೆ ಅಥವಾ ಸಕ್ರ್ಯೂಟ್ ಬ್ರೇಕ್ ಮಾಡಿದಾಗ ಅಲರ್ಟ್ ಆಗುವಂತೆ ಸೈರನ್ ಅಳವಡಿಸಿಕೊಳ್ಳಬೇಕು.ಅದರಿಂದ ದ್ವಿಚಕ್ರ ವಾಹನಗಳ ಕಳುವು ಸಾಧ್ಯತೆಯೂ ಕಡಿಮೆ ಹಾಗೂ ಕಳುವಾದಾಗ ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
30/06/2025 10:05 pm