ದಿಸ್ಪುರ್ (ಅಸ್ಸಾಂ): ಪತ್ನಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದ ಪತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ತನ್ನ ‘ಸ್ವಾತಂತ್ರ್ಯ’ವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ವಿಚಿತ್ರ ಘಟನೆ ಅಸ್ಸಾಂ ರಾಜ್ಯದ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್ ಎಂಬ ಗ್ರಾಮದಲ್ಲಿ ನಡೆದಿದೆ.
ಮಾಣಿಕ್ ಅಲಿ ಎಂಬ ವ್ಯಕ್ತಿಯು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಹೆಚ್ಚು ವೈರಲ್ ಆಗಿದೆ. "ನಾನು ಈಗ ಸ್ವತಂತ್ರ, ಪತ್ನಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದೇನೆ. ಈ ಹಾಲು ಸ್ನಾನವು ಶುದ್ಧೀಕರಣ ಮತ್ತು ಬಿಡುಗಡೆಯ ಸಂಕೇತವಾಗಿದೆ ಎಂದು ಹೇಳುತ್ತಾನೆ.
ಪತ್ನಿ ತನ್ನ ಪ್ರಿಯಕರನೊಂದಿಗೆ ಆಗಾಗ ಓಡಿಹೋಗುತ್ತಲೇ ಇದ್ದಳು. ನಾನು ನಮ್ಮ ಕುಟುಂಬದ ಗೌರವ ಹಾಗೂ ಶಾಂತಿಗಾಗಿ ಮೌನವಾಗಿದ್ದೆ. ಬಳಿಕ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೆವು. ನನ್ನ ವಕೀಲರು ಕರೆ ಮಾಡಿ ವಿಚ್ಛೇದನ ಸಿಕ್ಕ ಮಾಹಿತಿ ನೀಡಿದರು ಎಂದು ಮಾಣಿಕ್ ಅಲಿ ಮಾಹಿತಿ ನೀಡಿದ್ದಾನೆ.
ಹಾಲಿನ ಸ್ನಾನದ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
PublicNext
13/07/2025 05:59 pm