“ವೈದ್ಯೋ ನಾರಾಯಣೋ ಹರಿ" ಅಂತಾರೆ ಆದರೆ ಅಂತಹ ಪವಿತ್ರ ವೈದ್ಯಕೀಯ ವೃತ್ತಿಯ ಮುಖವಾಡ ಧರಿಸಿ ಮಕ್ಕಳಿಲ್ಲದ ದಂಪತಿಗಳಿಗೆ ಆಶಾಕಿರಣದಂತೆ ಕಾಣಿಸಿಕೊಂಡಿದ್ದ ಡಾ. ಅಟ್ಟಲೂರಿ ನಮ್ರತಾ ಬಗ್ಗೆ ಆಘಾತಕಾರಿ ಸತ್ಯಗಳು ಬಯಲಾಗಿದ್ದು,
ಬಾಡಿಗೆ ಗರ್ಭಧಾರಣೆಯ ಹೆಸರಿನಲ್ಲಿ ಶಿಶುಗಳನ್ನು ಕಳ್ಳಸಾಗಣೆ ಮಾಡುವಂತಹ ಭೀಕರ ಅಪರಾಧ ಜಾಲದ ಸುತ್ರಧಾರಿಯಾಗಿರುವ ಆಕೆಯನ್ನು ಸಿಕಂದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ವಿಜಯವಾಡ ಮೂಲದ ನಮ್ರತಾ, ಆಂಧ್ರಾ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಹಾಗೂ ಕರ್ನಾಟಕದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. (ಸ್ತ್ರೀರೋಗ ಶಾಸ್ತ್ರ) ಪೂರೈಸಿದ್ದಾರೆ. ಬೆಂಗಳೂರು, ಮುಂಬೈ, ಸಿಂಗಾಪುರ, ಜರ್ಮನಿ ಮುಂತಾದ ಕಡೆಗಳಲ್ಲಿ ತರಬೇತಿ ಪಡೆದಿದ್ದರೂ, ಸಮಾಜ ಸೇವೆಗೆ ತನ್ನ ಜ್ಞಾನ ಬಳಸುವ ಬದಲು, ಅಕ್ರಮ ದಂಧೆಗಳಲ್ಲಿ ತೊಡಗಿದ್ದರು.
ಆಕೆ ತಮ್ಮ 'ಸೃಷ್ಟಿ' ಹೆಸರಿನ ಆಸ್ಪತ್ರೆಯಲ್ಲಿ ಗ್ರಾಮೀಣ ಬಡ ಗರ್ಭಿಣಿಯರ ಅಸಹಾಯಕರ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು, ಆಶಾ ಕಾರ್ಯಕರ್ತರು ಹಾಗೂ ಏಜೆಂಟರ ಮೂಲಕ ಅವರನ್ನು “ಉಚಿತ ಹೆರಿಗೆ” ಹೆಸರಿನಲ್ಲಿ ಆಮಿಷವಿಟ್ಟು ಕರೆತರುತ್ತಿದ್ದಳು. ಹೆರಿಗೆಯಾದ ಬಳಿಕ "ಮಗು ಹುಟ್ಟುತ್ತಲೇ ಸತ್ತಿದೆ" ಎಂದು ಸುಳ್ಳು ಹೇಳಿ ತಾಯಂದಿರನ್ನು ತೊಡೆದುಹಾಕಿ, ನವಜಾತ ಶಿಶುಗಳನ್ನು ಲಕ್ಷಾಂತರ ರೂಪಾಯಿಗೆ ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದಳು. ಜತೆಗೆ ನಕಲಿ ಜನನ ಪ್ರಮಾಣಪತ್ರಗಳನ್ನು ಸೃಷ್ಟಿಸುವ ಮೂಲಕ, ತಾಯಿಯ ನೆಪದಲ್ಲಿ ಖರೀದಿದಾರರ ಹೆಸರನ್ನು ನೊಂದಾಯಿಸುತ್ತಿದ್ದಳು.
2020ರಲ್ಲಿ ಬುಚಯ್ಯಪೇಟೆಯ ವೆಂಕಟಲಕ್ಷ್ಮಿ ಎಂಬ ಮಹಿಳೆಗೆ, ಹೆಣ್ಣು ಮಗು ಸತ್ತಿಹೋಯಿತು ಎಂದು ಹೇಳಿ, ಆ ಮಗುವನ್ನು ವಿಜಯನಗರಂನ ದಂಪತಿಗೆ 13 ಲಕ್ಷಕ್ಕೆ ಮಾರಾಟ ಮಾಡಿದ ಪ್ರಕರಣದ ತನಿಖೆಯಲ್ಲಿ ಸತ್ಯ ಬಯಲಾಗಿತ್ತು. ಡಿಎನ್‌ಎ ಪರೀಕ್ಷೆಯ ಮೂಲಕ ಸತ್ಯ ಸಾಬೀತಾದ ಬಳಿಕ, ಪ್ರಕರಣ ದೂರು ದಾಖಲಾಗಿತ್ತು.
ಇದೇ ರೀತಿ, ಮಡುಗುಲದ ವಿಧವೆ ಸುಂದರಮ್ಮನ ಮಗುವನ್ನು ಪಶ್ಚಿಮ ಬಂಗಾಳದ ದಂಪತಿಗೆ ಮಾರಾಟ ಮಾಡಲಾಗಿತ್ತು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯ ಸಮಯೋಚಿತ ದೂರು ನೀಡಿದ ನಂತರ, ಪೊಲೀಸರು ನಮ್ರತಾ ಹಾಗೂ ಇನ್ನಿತರ 8 ಮಂದಿಯನ್ನೊಳಗೊಂಡ ಅಪರಾಧ ಜಾಲವನ್ನು ಭೇದಿಸಿದ್ದರು. ಅಷ್ಟರಲ್ಲಿ, ಡಾ. ನಮ್ರತಾ ಅವರ ಮೋಸ ವೈದ್ಯಕೀಯ ವೃತ್ತಿಗೆ ಮಾತ್ರ ಸೀಮಿತವಾಗಿರದೆ, ರಿಯಲ್ ಎಸ್ಟೇಟ್ ದಂಧೆಗೂ ವಿಸ್ತರಿಸಿತ್ತು. 2008ರಲ್ಲಿ ತಿರುಪತಿಯ ನಿವೃತ್ತ ಶಿಕ್ಷಕ ದಂಪತಿಗೆ ಜಮೀನು ಮಾರಾಟ ಮಾಡುವ ನಂಬಿಕೆಯಿಂದ 27 ಲಕ್ಷ ಮುಂಗಡ ಪಡೆದಿದ್ದಳು. ಆದರೆ ಅದೇ ಜಮೀನನ್ನು ಇತರರಿಗೂ ಮಾರಾಟ ಮಾಡಿದ್ದಳು. ಈ ಕುರಿತು ಹೈದರಾಬಾದ್, ವಿಜಯವಾಡ ಮತ್ತು ಚಿಕ್ಕಬಳ್ಳಾಪುರ ಠಾಣೆಗಳಲ್ಲಿ ಪ್ರಕರಣಗಳು ಕೂಡಾ ದಾಖಲಾಗಿ ಇದೀಗ ಪೊಲೀಸರ ಅಥಿಯಾಗಿದ್ದು, ವೈದ್ಯೆ ವೃತ್ತಿಗೆ ಕಳಂಕ ತಂದಿದ್ದಾಳೆ.
PublicNext
29/07/2025 06:49 pm