ತಿರುವನಂತಪುರಂ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಅಂತಹದ್ದೇ ಒಂದು ಘಟನೆ ಕೇರಳದ ಬಸ್‌ವೊಂದರಲ್ಲಿ ನಡೆದಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು, ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ವೃದ್ಧ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಳೆ. ಈ ವೇಳೆ ಯುವತಿ ಧೈರ್ಯದಿಂದ ಪ್ರತಿಕ್ರಿಯಿಸಿ, ಬಸ್‌ನಲ್ಲೇ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ವರದಿಯ ಪ್ರಕಾರ, ಬಸ್‌ನಲ್ಲಿ ಸವಾರಿ ಮಾಡುತ್ತಿದ್ದಾಗ ವೃದ್ಧ ವ್ಯಕ್ತಿಯೊಬ್ಬ ತನ್ನ ಕೈಯನ್ನು ನಿಧಾನವಾಗಿ ಯುವತಿಯ ಎದೆ ಹತ್ತಿರ ಇರಿಸಿದ್ದಾನೆ. ಪ್ರಾರಂಭದಲ್ಲಿ ಆಕೆಯು ನಿರ್ಲಕ್ಷಿಸಿದ್ದರೂ, ಆ ವ್ಯಕ್ತಿಯ ಉದ್ದೇಶಪೂರ್ವಕ ನಡೆ ಎಂದು ತಿಳಿದ ಕೂಡಲೇ, ತನ್ನ ಸ್ನೇಹಿತೆಗೆ ವಿಡಿಯೋ ತೆಗೆದುಕೊಳ್ಳಲು ಹೇಳಿದ್ದಾಳೆ. ನಂತರ ಧೈರ್ಯದಿಂದ ಎದ್ದು ನಿಂತು, ಎಲ್ಲಾ ಜನರ ಎದುರಲ್ಲೇ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
"ನಿಮ್ಮ ಮನೆಗಳಲ್ಲಿ ಹೆಣ್ಣುಮಕ್ಕಳಿಲ್ಲವೇ?" ಎಂದು ಕೇಳಿ ಆಕ್ರೋಶಗೊಂಡ ಯುವತಿ, ಆತನು ಮಾಡಿದ ಕೃತ್ಯಕ್ಕೆ ತಕ್ಷಣವೇ ಕಪಾಳಮೋಕ್ಷ ಮಾಡಿದ್ದಾಳೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಯುವತಿಯ ಧೈರ್ಯಕ್ಕೆ ನೆಟ್ಟಿಗರು ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ.
PublicNext
29/07/2025 07:17 pm