ಮಿನ್ನಿಯಾಪೋಲಿಸ್: ಭಾರತೀಯ ಮೂಲದ ಡೆಲ್ಟಾ ಏರ್‌ಲೈನ್ಸ್ ಪೈಲಟ್‌ರೊಬ್ಬರನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ವಿಮಾನ ಲ್ಯಾಂಡ್ ಆದ 10 ನಿಮಿಷದೊಳಗೆ ಬಂಧಿಸಲಾಗಿದೆ.
34 ವರ್ಷದ ರುಸ್ತಮ್ ಭಾಗ್ವಾಗರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಡೆಲ್ಟಾ ಫ್ಲೈಟ್ 2809, ಬೋಯಿಂಗ್ 757-300, ಅಮೆರಿಕದ ಮಿನ್ನಿಯಾಪೋಲಿಸ್‌ನಿಂದ ಬಂದ ಸ್ವಲ್ಪ ಸಮಯದ ನಂತರ ಕಾಂಟ್ರಾ ಕೋಸ್ಟಾ ಕೌಂಟಿ ಶೆರಿಫ್ ಇಲಾಖೆಯ ಅಧಿಕಾರಿಗಳು ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಏಜೆಂಟ್‌ಗಳು ಕಾಕ್‌ಪಿಟ್‌ಗೆ ನುಗ್ಗಿ ಪೈಲಟ್‌ನ್ನು ಬಂಧಿಸಿದ್ದಾರೆ ಎಂದು USA ಟುಡೇ ವರದಿ ಪ್ರಕಟಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೈಲಟ್‌ನ ಬಂಧನವು ಅಚಾನಕ್ ಆಗಿದ್ದು, ಸಹ-ಪೈಲಟ್‌ಗೂ ಈ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು, ಅವರ ಬಂಧನದ ಬಗ್ಗೆ ಮೊದಲೇ ಯಾವುದೇ ಸೂಚನೆ ನೀಡಲಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ಏಪ್ರಿಲ್‌ನಲ್ಲಿ 10 ವರ್ಷದೊಳಗಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧಿಸಿದ ಪ್ರಕರಣದಲ್ಲಿ ಭಾಗ್ವಾಗರ್ ಅವರನ್ನು ಶಂಕಿತನಾಗಿ ಗುರುತಿಸಲಾಗಿತ್ತು. ಅದರಂತೆ ಬಂಧನ ವಾರಂಟ್ ಜಾರಿಗೊಳಿಸಿ, ಈ ಮಧ್ಯೆ ತನಿಖೆ ಮುಂದುವರಿಸಲಾಗಿತ್ತು ಎಂದು ಕಾಂಟ್ರಾ ಕೋಸ್ಟಾ ಶೆರಿಫ್ ಇಲಾಖೆ ತನ್ನ ಅಧಿಕೃತ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.
PublicNext
29/07/2025 06:38 pm