ನೆಲಮಂಗಲ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಒಂಟಿ ಮಹಿಳೆಗೆ ಬೈಕ್ ನಲ್ಲಿ ಬಂದ ಅಪ್ರಾಪ್ತ ವಯಸ್ಕನೊಬ್ಬ ಮಹಿಳೆಯ ಕೈ ಎಳೆದು ಅಸಭ್ಯ ವರ್ತನೆ ತೋರಿ ಮಾನಭಂಗಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ನೆಲಮಂಗಲದ ಬೋಳಮಾರನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 17 ವರ್ಷದ ಹುಡುಗ ತನ್ನ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ 36 ವರ್ಷದ ಮಹಿಳೆ, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ.
ಒಂಟಿಯಾಗಿ ಈ ಮಹಿಳೆ ಬಸ್ ನಿಲ್ದಾಣಕ್ಕೆ ಬೋಳಮಾರನಹಳ್ಳಿ ಗ್ರಾಮದ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ಹೋಗುತ್ತಿದ್ದ ಈತ ಬಂದು ಮಹಿಳೆಯ ಕೈ ಹಿಡಿದು ಹೊಲದ ಒಳಗೆ ಎಳೆದೊಯ್ಯಲು ಯತ್ನಿಸಿದ್ದಾನೆ. ಇದೇ ವೇಳೆ ಮಹಿಳೆ, ಕಾಮುಕನಿಂದ ತಪ್ಪಿಸಿಕೊಳ್ಳಲು ಬೊಬ್ಬೆ ಹಾಕಿದ್ದಾರೆ. ಆಕೆಯ ಚೀರಾಟ ಕೇಳಿದ ಗ್ರಾಮಸ್ಥರು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ.
ತಪ್ಪಿಸಿಕೊಳ್ಳುವ ವೇಳೆ ಈ ಕಾಮುಕ, ಗ್ರಾಮಸ್ಥರಿಗೆ ಸಿಕ್ಕಿ ಬಿದ್ದಿದ್ದು, ಗ್ರಾಮಸ್ಥರು ಹಿಡಿದು ಚೆನ್ನಾಗಿಯೇ ಥಳಿಸಿದ್ದಾರೆ. ಮಹಿಳೆಯ ಬಳಿ ಹಣ, ಸರ ಕಸಿದುಕೊಳ್ಳಲು ಬಂದಿದ್ದಾಗಿ ಈತ ಗ್ರಾಮಸ್ಥರ ಬಳಿ ಹೇಳಿಕೊಂಡಿದ್ದು, ಗ್ರಾಮಸ್ಥರು ಪೊಲೀಸರಿಗೊಪ್ಪಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಯಗೊಂಡಿದ್ದ ಮಹಿಳೆಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಕಾಮುಕನ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
08/09/2025 08:05 am