ಗುಂಡ್ಲುಪೇಟೆ: ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿಯನ್ನ ರಕ್ಷಣೆ ಮಾಡಿದ ಸ್ಥಳೀಯ ರೈತರು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ತಾಲೂಕಿನ ಹಂಗಳಪುರ ಗ್ರಾಮದಲ್ಲಿ ನಡೆದಿದೆ.
ಹಂಗಳಪುರ ಗ್ರಾಮದ ರೈತ ಸಿದ್ದಲಿಂಗಪ್ಪ ಎಂಬುವರ ಕಬ್ಬಿನ ತೋಟದಲ್ಲಿ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿ ಪತ್ತೆಯಾಗಿದೆ. ಕಬ್ಬು ಕಟಾವು ಮಾಡುವ ವೇಳೆ ಮರಿಯನ್ನ ಅಲ್ಲೇ ಬಿಟ್ಟು ತಾಯಿ ಚಿರತೆ ಕಾಲ್ಕಿತ್ತಿದೆ ಎನ್ನಲಾಗಿದೆ. ಚಿರತೆ ಮರಿ ಪತ್ತೆಯಾಗಿರುವ ಕುರಿತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಮರಿಯನ್ನ ಬಿಟ್ಟು ಹೋಗಿರುವ ಚಿರತೆ ಮತ್ತೆ ವಾಪಾಸ್ ಬರುವ ಸಾಧ್ಯತೆಗಳಿರುವ ಕಾರಣ ಮರಿಯನ್ನ ಅಲ್ಲೇ ಇರಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಗುಂಡ್ಲುಪೇಟೆ
Kshetra Samachara
08/09/2025 12:44 pm