ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ್ದ ಸಜಾ ಖೈದಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೇತನ್ ಕಲ್ಯಾಣಿ ಎಸ್ಕೇಪ್ ಆದ ಸಜಾ ಖೈದಿ, ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯ ಬೇಜವಾಬ್ದಾರಿಯಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಖೈದಿಯನ್ನು ವಿಜಯಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಗೆ ಶಿಫ್ಟ್ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅವನನ್ನು ಕಾರಾಗೃಹ ವೈದ್ಯರ ಸಲಹೆ ಮೇರೆಗೆ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿದ್ದ ವೇಳೆ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಆತ ತಪ್ಪಿಸಿಕೊಂಡಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಹಿಡಿಯಲು ಯತ್ನಿಸಿದರೂ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾನೆ.
ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಪ್ಪನ ಅಗ್ರಹಾರ ಸಿಬ್ಬಂದಿ ರಘು ನೀಡಿದ ದೂರಿನ ಮೇರೆಗೆ BNS 262 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಆಗಸ್ಟ್ 3 ರಂದು ವಿಜಯಪುರ ಜೈಲಿನಿಂದ ಬೆಂಗಳೂರಿಗೆ ತರಲಾಗಿದ್ದ ಚೈತನ್ಯ, ಆಗಸ್ಟ್ 21 ರಿಂದ ಕಿದ್ವಾಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದ. ಆದರೆ ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸಿಬ್ಬಂದಿಯ ಕಣ್ತಪ್ಪಿಸಿ ಆತ ತಪ್ಪಿಸಿಕೊಂಡಿದ್ದಾನೆ.
ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ ಚೈತನ್ಯಗೆ ಸರಿಯಾಗಿ ಮಾತನಾಡಲು ಸಹ ಆಗುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಪತ್ತೆ ಹಚ್ಚಲು ಸಿದ್ದಾಪುರ ಪೊಲೀಸರು ಬಲೆ ಬೀಸಿದ್ದಾರೆ.
PublicNext
09/09/2025 10:10 am