ಸಕಲೇಶಪುರ: ನ್ಯಾಯಕ್ಕಾಗಿ ಧ್ವನಿ ಎತ್ತಿದ ಸಾಮಾಜಿಕ ಹೋರಾಟಗಾರರ ಮೇಲೆ ಪೊಲೀಸ್ ವ್ಯವಸ್ಥೆಯ ಕಠೋರ ಕ್ರಮ – ಇದು ಕೇವಲ ಕಾನೂನು ಪ್ರಕ್ರಿಯೆಯೇ ಅಥವಾ ವ್ಯವಸ್ಥಿತ ದೌರ್ಜನ್ಯದ ಭಾಗವೇ? ಸಕಲೇಶಪುರ ತಾಲೂಕಿನಲ್ಲಿ ನಡೆದ ಕಾಡಾನೆ-ಮಾನವ ಸಂಘರ್ಷದ ಪ್ರತಿಭಟನೆಗಳು, ಅರ್ಜುನ ಆನೆಯ ಮರಣದ ಸತ್ಯಾಂಶಗಳ ಬಯಲುಗೊಳಿಸುವ ಆಗ್ರಹ ಹಾಗೂ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿದ ಹೋರಾಟದ ಹಿನ್ನೆಲೆಯಲ್ಲಿ, ಕನ್ನಡಪರ ಹೋರಾಟಗಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಯಡೇಹಳ್ಳಿ ಆರ್. ಮಂಜುನಾಥ್ ಸೇರಿದಂತೆ 21 ಮಂದಿಗೆ ನಿನ್ನೆ 8 ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಸಮನ್ಸ್ ಜಾರಿ ಮಾಡಿದ್ದು, ತಾಲೂಕಿನಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದೆ.
ಕಳೆದ ವರ್ಷ ಸಕಲೇಶಪುರದ ಯಾಸಳೂರು ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಅರ್ಜುನ ಆನೆಯ ಮರಣ ಹೊಂದಿದ ಘಟನೆಯು ರೈತರು ಮತ್ತು ಸ್ಥಳೀಯರಲ್ಲಿ ಭಾರೀ ಅಸಮಾಧಾನ ಮೂಡಿಸಿತ್ತು. "ಅರ್ಜುನನನ್ನು ಅನ್ಯಾಯವಾಗಿ ಸಾಯಿಸಲಾಗಿದೆ" ಎಂದು ಆರೋಪಿಸಿ ನಡೆದ ಪ್ರತಿಭಟನೆಗಳಲ್ಲಿ ಯಡೇಹಳ್ಳಿ ಆರ್. ಮಂಜುನಾಥ್ ಅವರು ಮುಂಚೂಣಿಯಲ್ಲಿದ್ದರು.
ಕಾಡಾನೆ ದಾಳಿಯಿಂದ ಸತ್ತವರ ಕುಟುಂಬಗಳಿಗೆ ನ್ಯಾಯ, ಅರ್ಜುನನ ಸಾವಿನ ಸತ್ಯಾಂಶಗಳ ತನಿಖೆ ಹಾಗೂ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ನಡೆದ ಹೋರಾಟಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದವು. ಆದರೆ ಇದೀಗ, ಈ ಹೋರಾಟಗಾರರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದು, "ಜನಪರ ಹೋರಾಟವನ್ನು ರಾಜಕೀಯವಾಗಿ ತಡೆಯುವ ಪ್ರಯತ್ನ" ಎಂಬ ಆರೋಪಗಳಿಗೆ ದಾರಿ ಮಾಡಿಕೊಟ್ಟಿದೆ.
ಸಮನ್ಸ್ ಸ್ವೀಕರಿಸಿದ ನಂತರ ನಮ್ಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡೇಹಳ್ಳಿ ಆರ್. ಮಂಜುನಾಥ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಜನರ ಸಮಸ್ಯೆ ಹೇಳಿದ್ರೆ ಕೇಸು. ಕಾಡಾನೆಗಳ ದಾಳಿಯಿಂದ ಸತ್ತವರ ಮನೆಗೆ ನ್ಯಾಯ ಕೊಡಿಸಿದ್ದಕ್ಕೆ ಕೇಸು. ಅರ್ಜುನನ ಸತ್ಯ ಹೊರತೆಗೆಯಲೆಂದರೆ ಕೇಸು. ಇನ್ನು ಜನಸಾಮಾನ್ಯರು ನ್ಯಾಯವನ್ನು ಯಾರಿಂದ ಕೇಳಬೇಕು?” ಎಂದು ಪ್ರಶ್ನಿಸಿದ ಅವರು, ಮುಂದುವರಿಸಿ ಹೇಳಿದರು: “ಇದು ಕೇವಲ ನನ್ನ ಮೇಲೆ ದೌರ್ಜನ್ಯವಲ್ಲ, ಇದು ವ್ಯವಸ್ಥಿತ ಪೊಲೀಸ್ ದೌರ್ಜನ್ಯ ಮತ್ತು ಅಧಿಕಾರ ದುರ್ಬಳಕೆಯ ಉದಾಹರಣೆ. ಹೋರಾಟವನ್ನು ರಾಜಕೀಯವಾಗಿ ತಡೆಯುವ ಪ್ರಯತ್ನ ಸ್ಪಷ್ಟವಾಗಿದೆ.
ಈ ಬೆಳವಣಿಗೆಗೆ ಸ್ಥಳೀಯ ಗ್ರಾಮಸ್ಥರು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. “ವ್ಯವಸ್ಥೆಯ ದೌರ್ಜನ್ಯವನ್ನು ವಿರೋಧಿಸಿದರೂ ಕೇಸು, ಜನರ ಪರ ಹೋರಾಡಿದರೂ ಕೇಸು… ಇದು ಯಾವ ನ್ಯಾಯ?” ಎಂದು ಪ್ರಶ್ನಿಸುತ್ತಿರುವ ಸ್ಥಳೀಯರು, ಹೋರಾಟಗಾರರ ಮೇಲಿನ ಕ್ರಮವನ್ನು ಖಂಡಿಸಿದ್ದಾರೆ.
PublicNext
10/12/2025 01:38 pm