ಹಾಸನ: ಗಾಂಜಾ ಅಮಲಿನಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿ, ಶವದ ಮುಂದೆಯೇ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ವಿಕೃತಿ ಮೆರೆದಿದ್ದ ಪ್ರಮುಖ ಆರೋಪಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಅಮಲಿನಲ್ಲಿದ್ದಾಗ ಸ್ನೇಹಿತನನ್ನೇ ಕೊಂದು, ಶವದ ಮುಂದೆ ವಿಕೃತ ವಿಡಿಯೋ ಮಾಡಿ ಹರಿಯಬಿಟ್ಟಿದ್ದ ಈ ಪ್ರಕರಣ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆ ವಿವರ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಬಂಧಿತ ಆರೋಪಿ ಆಲೂರು ತಾಲೂಕಿನ ದೊಡ್ಡಕಣಗಾಲು ಗ್ರಾಮದ 21 ವರ್ಷದ ಆಟೋ ಚಾಲಕ ಉಲ್ಲಾಸ್ ಕ್ಯಾಟಿ ಎಂದು ತಿಳಿಸಿದ್ದಾರೆ. ಮೃತ ಯುವಕ ಹೂವಿನಹಳ್ಳಿ ಗ್ರಾಮದ 21 ವರ್ಷದ ಕೀರ್ತಿ. ಉಲ್ಲಾಸ್ ಮತ್ತು ಕೀರ್ತಿ ಇಬ್ಬರೂ ಆಟೋ ಚಾಲಕರಾಗಿದ್ದು, ಸ್ನೇಹಿತರಾಗಿದ್ದರು. ನವೆಂಬರ್ 8ರ ಸಂಜೆ ಕ್ಷುಲ್ಲಕ ಕಾರಣಕ್ಕೆ ಉಲ್ಲಾಸ್ ಹಾಗೂ ಇತರ ಆರೋಪಿಗಳು ಕೀರ್ತಿಯೊಂದಿಗೆ ಜಗಳ ತೆಗೆದು ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ನಂತರ, ಬಂಧಿತ ಆರೋಪಿ ಉಲ್ಲಾಸ್, ಕೀರ್ತಿಯ ಶವದ ಮುಂದೆಯೇ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಎಂದು ಎಸ್ಪಿ ವಿವರಿಸಿದರು.
ಶವ ಪತ್ತೆ ಮತ್ತು ಪೊಲೀಸ್ ಕಾರ್ಯಾಚರಣೆ
ನವೆಂಬರ್ 9ರಂದು ಬೆಳಗ್ಗೆ ಮೃತ ಕೀರ್ತಿಯ ಸಹೋದರ ಕಿರಣ್ ಅವರ ಮೊಬೈಲ್‌ಗೆ ಈ ವಿಕೃತ ವಿಡಿಯೋ ಬಂದಿತ್ತು. ಕೂಡಲೇ ಅವರು ಹಾಸನ ನಗರ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು. ವಿಡಿಯೋದಲ್ಲಿದ್ದ ಸ್ಥಳದ ಅಂದಾಜಿನಲ್ಲಿ ಕಾರ್ಯಪ್ರವೃತ್ತರಾದ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕ, ಹೆಡ್ ಕಾನ್ಸ್‌ಟೇಬಲ್ ಹರೀಶ್ ಮತ್ತು ಸಿಬ್ಬಂದಿ ಲತೇಶ್, ಚನ್ನಪಟ್ಟಣ ಮತ್ತು ಬಿಟ್ಟಗೌಡನಹಳ್ಳಿ ಜಂಕ್ಷನ್ ನಡುವಿನ ಪವನಪುತ್ರ ಕೋಳಿ ಫಾರಂ ಹಿಂಭಾಗದ ಖಾಲಿ ಜಾಗದಲ್ಲಿ, ಮುಳ್ಳು ಮತ್ತು ಗಿಡಗಳ ನಡುವೆ ಹುಡುಕಾಟ ನಡೆಸಿದರು. ಈ ವೇಳೆ ಕೀರ್ತಿಯ ಶವ ಪತ್ತೆಯಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಮುಖ ಆರೋಪಿ ಉಲ್ಲಾಸ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದರು.
PublicNext
11/12/2025 08:29 am