ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ: ಪಿಡಿಒ ದರ್ಶನ್ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆ ವೃತ್ತದಲ್ಲಿ ಪ್ರತಿನಿತ್ಯ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ಅಂಗಡಿ ಮಾಲೀಕರು ಮತ್ತು ಸ್ಥಳೀಯ ಗ್ರಾಮಸ್ಥರು ಎದುರಿಸುತ್ತಿದ್ದ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಸಿಕ್ಕಿದೆ.

ಹಲವು ತಿಂಗಳುಗಳಿಂದ ಕೆಟ್ಟು ನಿಂತಿದ್ದ ಶುದ್ಧ ನೀರು ಘಟಕವನ್ನು ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ ವಳಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ದರ್ಶನ್ ಅವರಿಗೆ ಸಾರ್ವಜನಿಕರಿಂದ ಗೌರವ ಸಮರ್ಪಣೆ ಮಾಡಲಾಯಿತು.

ಮೂರು ವರ್ಷಗಳ ಹಿಂದೆ ಸ್ಥಾಪಿಸಲಾದ ಈ ಶುದ್ಧ ನೀರು ಘಟಕವು ತಾಂತ್ರಿಕ ದೋಷದಿಂದ ಕೇವಲ 10-15 ದಿನಗಳಲ್ಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಹಿಂದಿನ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಕಾರಣ ಸಮಸ್ಯೆ ಉಲ್ಬಣಿಸಿತ್ತು. ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರು ಮತ್ತು ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು.

ಕಳೆದ ಒಂದು ತಿಂಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ರೈತ ಘಟಕದ ಅಧ್ಯಕ್ಷ ವಸಂತ ಬೊಮ್ಮನಕೆರೆ, ಕಾರ್ಯಕರ್ತರು ಮತ್ತು ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಸದಸ್ಯರು ನೂತನ PDO ದರ್ಶನ್ ಅವರಿಗೆ ಮನವಿ ಸಲ್ಲಿಸಿದ್ದರು. ಸಮಸ್ಯೆಯ ಗಂಭೀರತೆಯನ್ನು ಅರಿತ ದರ್ಶನ್ ಅವರು ತಕ್ಷಣ ಕ್ರಮ ಕೈಗೊಂಡು, ಬಾಕಿ ಉಳಿದಿದ್ದ ವಿದ್ಯುತ್ ಬಿಲ್ ಪಾವತಿಸಿ ಘಟಕವನ್ನು ದುರಸ್ತಿ ಮಾಡಿಸಿದರು. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ಅನುಕೂಲವಾಗಿದೆ.

ಈ ಸೇವೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ, ಇಂದು ಶುದ್ಧ ನೀರು ಘಟಕದ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಬೆಳೆಗಾರರ ಸಂಘದ ವತಿಯಿಂದ ದರ್ಶನ್ ಅವರಿಗೆ ಗೌರವ ಸಮರ್ಪಣೆ ನಡೆಸಲಾಯಿತು. ಅವರ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ್ ಹೊಸಹಳ್ಳಿ, ಬೆಳೆಗಾರರ ಸಂಘದ ಅಧ್ಯಕ್ಷ ದರ್ಶನ್, ಖಜಾಂಚಿ ಹೂವನ್ನ ಗೌಡ, ಮಾಜಿ ಕಾರ್ಯದರ್ಶಿ ಪಾಲಾಕ್ಷ, ನಿರ್ದೇಶಕ ವಿ.ಪಿ. ವಿಶ್ವನಾಥ್ ಸೇರಿದಂತೆ ಕರವೇ ಸಂಘದ ಕಾರ್ಯಕರ್ತರು ಹಾಜರಿದ್ದರು.

Edited By : Somashekar
PublicNext

PublicNext

13/12/2025 03:04 pm

Cinque Terre

9.26 K

Cinque Terre

0