ಸಕಲೇಶಪುರ: ಮೈಸೂರು ದಸರಾ ಆಕರ್ಷಣೆಯಾಗಿದ್ದ ಕಾಡಾನೆ ಅರ್ಜುನನ ಸಾವಿನ ನಂತರ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಕಲೇಶಪುರ ತಾಲೂಕಿನ ಸ್ಥಳೀಯ ನ್ಯಾಯಾಲಯವು 19 ಮಂದಿ ಗ್ರಾಮಸ್ಥರು ಮತ್ತು ನಾಯಕರಿಗೆ ಡಿಸೆಂಬರ್ 30ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣವು ಕಾಡಾನೆ-ಮಾನವ ಸಂಘರ್ಷದಲ್ಲಿ ನಿರಂತರ ಹೋರಾಟ ಮಾಡುತ್ತಿರುವ ಕೃಷಿಕರು ಮತ್ತು ಪರಿಸರವಾದಿಗಳ ವಿರುದ್ಧ ಸರ್ಕಾರಿ ಕ್ರಮವಾಗಿ ವ್ಯಾಪಕ ಟೀಕೆಗೆ ಒಳಗಾಗಿದೆ.
2023ರಲ್ಲಿ ಹಾಸನ ಜಿಲ್ಲೆಯ ಯೆಸ್ಲೂರ್ ಬಳಿ ಕಾಡಾನೆ ಸೆರೆ ಹಿಡಿಯುವ ಆಪರೇಷನ್‌ನಲ್ಲಿ ಅರ್ಜುನ ಎಂಬ ದಸರಾ ಆನೆ ಕಾಡಾನೆಯ ದಾಳಿಗೆ ಒಳಗಾಗಿ ಮೃತಪಟ್ಟಿತ್ತು. ಈ ಘಟನೆಯ ನಂತರ ಸ್ಥಳೀಯರು ಮತ್ತು ಹೋರಾಟಗಾರರು ಅರ್ಜುನನ ಅಂತ್ಯಕ್ರಿಯೆಯ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಅರ್ಜುನನ ಸಮಾಧಿಯನ್ನು ತೋಡುತ್ತಿದ್ದ ಜೆಸಿಬಿ ಯಂತ್ರವನ್ನು ತಡೆದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂಬ ಆರೋಪದಡಿ ಪೊಲೀಸ್ ಕಾನ್‌ಸ್ಟೆಬಲ್ ಬಿ.ಎಂ. ಗಿರೀಶ್ ದೂರು ದಾಖಲಿಸಿದ್ದರು.
ಆರೋಪಿಗಳ ಪೈಕಿ ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಗೌರವಾಧ್ಯಕ್ಷ ಯಡೇಹಳ್ಳಿ ಆರ್. ಮಂಜುನಾಥ್ (ಕೆಪಿಸಿಸಿ ಸದಸ್ಯರು), ಕಾಡಾನೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಹುರುಡಿ ವಿಕ್ರಂ, ಕಾಫಿ ಬೆಳೆಗಾರರ ಸಂಘಟನೆಯ ಬೆಕ್ಕನಹಳ್ಳಿ ನಾಗರಾಜ್ ಸೇರಿದಂತೆ ಉದಯ್, ನವೀನ್, ಶೋಧನ್, ರವಿ, ಆಕಾಶ್, ರತನ್, ಕಿರಣ್, ಆನಂದ್, ದೇವರಾಜು, ಶ್ರೀವೇಣಗೌಡ, ಜಯಪ್ಪ, ಸಂತೋಷ್, ಸಚಿನ್, ಜಗದೀಶ್, ಮನು, ಮಿಥುನ್ ಸೇರಿ 19 ಮಂದಿ ಇದ್ದಾರೆ.
ಹೋರಾಟಗಾರರು ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಯಡೇಹಳ್ಳಿ ಮಂಜುನಾಥ್ ಅವರು ಕಳೆದ 15 ವರ್ಷಗಳಿಂದ ಕಾಡಾನೆ-ಮಾನವ ಸಂಘರ್ಷದ ವಿರುದ್ಧ ನಿರಂತರ ಹೋರಾಟ ನಡೆಸಿ, ಅಧ್ಯಯನಗಳನ್ನು ಮಾಡಿ, ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸತ್ಯ, ನ್ಯಾಯ ಮತ್ತು ಧರ್ಮನಿಷ್ಠೆಯೊಂದಿಗೆ ನಡೆದುಕೊಂಡಿರುವ ಸಜ್ಜನರ ವಿರುದ್ಧ ಎರಡು ವರ್ಷಗಳ ಹಳೆಯ ಪ್ರತಿಭಟನೆಗೆ ಪ್ರಕರಣ ದಾಖಲಿಸಿರುವುದು ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಅವರು ಆರೋಪಿಸಿದ್ದಾರೆ.
ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಮತ್ತು ಕೆ.ಎಸ್. ಲಿಂಗೇಶ್ ಸೇರಿದಂತೆ ಹಲವು ನಾಯಕರು ಈ ಕ್ರಮವನ್ನು ಟೀಕಿಸಿದ್ದಾರೆ. ಕಾಡಾನೆ ಉಪಟಳ ಹೆಚ್ಚಾಗಿರುವ ಪ್ರದೇಶದಲ್ಲಿ ಅಂತಹ ಪ್ರತಿಭಟನೆಗಳು ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳು ಮಾನವ-ಪ್ರಾಣಿ ಸಂಘರ್ಷ ಕಡಿಮೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಡಾನೆ ಸಂಘರ್ಷದಿಂದ ಬೆಳೆ ಹಾನಿ ಮತ್ತು ಜೀವಹಾನಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೋರಾಟಗಾರರ ಕೊಡುಗೆಯನ್ನು ಅವಗಣಿಸಿ ಪ್ರಕರಣ ದಾಖಲಿಸಿರುವುದು ಸರ್ಕಾರದ ದೌರ್ಬಲ್ಯವನ್ನು ತೋರಿಸುತ್ತದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ,ತಾಲ್ಲೂಕು ರೈತ ಘಟಕದ ಅಧ್ಯಕ್ಷರಾದ ಪ್ರಸನ್ನ, ಸನಾಗೇಂದ್ರ, ಋತೇಶ್, ತೇಜೇಶ್,
ವಿನಯ್, ಯೋಗೇಶ್, ಗಿರೀಶ್ ಹಾಗೂ ಪದಾಧಿಕಾರಿಗಳು ಇದ್ದರು.
PublicNext
16/12/2025 03:17 pm