ಹಾಸನ: ಜಿಲ್ಲೆಯಲ್ಲಿ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಗೆ ಕೇಂದ್ರ ಸರ್ಕಾರ ತಕ್ಷಣವೇ ಅನುಮೋದನೆ ನೀಡಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಅವರು ಸಂಸತ್ತಿನ ಅಧಿವೇಶನದಲ್ಲಿ ಪ್ರಬಲವಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಸದರು, ಐಐಟಿ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಈಗಾಗಲೇ ಮೀಸಲಿಟ್ಟಿದೆ ಎಂದು ತಿಳಿಸಿದರು. ಹಾಸನವು ಶೈಕ್ಷಣಿಕವಾಗಿ ಹಾಗೂ ಭೌಗೋಳಿಕವಾಗಿ ಮಹತ್ವದ ಪ್ರದೇಶವಾಗಿದ್ದು, ಇಲ್ಲಿ ಸಂಸ್ಥೆ ಸ್ಥಾಪನೆಯಾದರೆ, ಹಾಸನ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಯುವಕರಿಗೆ ಉನ್ನತ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಅವಕಾಶ ದೊರೆಯಲಿದೆ ಎಂದು ಅವರು ವಿವರಿಸಿದರು.
ಐಐಟಿ ಸ್ಥಾಪನೆಯ ಮಹತ್ವವನ್ನು ವಿವರಿಸಿದ ಪಟೇಲ್ ಅವರು, "ಈ ಸಂಸ್ಥೆಯು ಕೇವಲ ಒಂದು ಶಿಕ್ಷಣ ಕೇಂದ್ರವಾಗಿ ಉಳಿಯುವುದಿಲ್ಲ. ಬದಲಿಗೆ, ಜಿಲ್ಲೆಯ ಶಿಕ್ಷಣ ಮಟ್ಟವನ್ನು ಉನ್ನತೀಕರಿಸುವುದರ ಜೊತೆಗೆ, ಸಂಶೋಧನೆ, ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡಲಿದೆ" ಎಂದು ಹೇಳಿದರು. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು
ರಾಜ್ಯ ಸರ್ಕಾರವು ಜಾಗವನ್ನು ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಇನ್ನುಳಿದ ಅನುಮೋದನೆ ಮತ್ತು ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸಂಸದರು ಮತ್ತೊಮ್ಮೆ ಮನವಿ ಮಾಡಿದರು.
Kshetra Samachara
16/12/2025 08:50 pm
LOADING...