ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಮುಲ್ಕಿ ಸಮೀಪದ ಹಳೆಯಂಗಡಿ ಜಂಕ್ಷನ್‌ನಲ್ಲಿ ಸೂಕ್ತ ಸರ್ವಿಸ್ ರಸ್ತೆ ಇಲ್ಲದೆ ತೀವ್ರ ಸಂಚಾರ ಸಮಸ್ಯೆಗಳು ಎದುರಾಗಿವೆ. ಪ್ರತಿ ಮಳೆಗಾಲದಲ್ಲಿ ಹಳೆಯಂಗಡಿ ಜಂಕ್ಷನ್‌ನಿಂದ ಪಕ್ಷಿಕೆರೆ-ಕಟೀಲು ರಸ್ತೆಯಲ್ಲಿ ಬೃಹತ್ ಹೊಂಡಗಳು ಉಂಟಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಅಪಾರ ತೊಂದರೆ ಅನುಭವಿಸುತ್ತಿದ್ದರು.
ಈ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದರೂ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೌನ ವಹಿಸಿತ್ತು. ಹಳೆಯಂಗಡಿ ಜಂಕ್ಷನ್ ಬಳಿ ಇದ್ದ ಅಪಾಯಕಾರಿ ಹೊಂಡಗಳಿಂದಾಗಿ ಹಲವು ಅಪಘಾತಗಳು ಸಂಭವಿಸಿ, ಅನೇಕ ವಾಹನ ಸವಾರರು ಮತ್ತು ಪಾದಚಾರಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಸ್ಥಳೀಯ ಪಂಚಾಯತ್ ಆಡಳಿತವು ಈ ಅಪಾಯಕಾರಿ ಹೊಂಡಗಳನ್ನು ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಅವರು, ಸ್ಥಳೀಯರ ಹಾಗೂ ಶಾಸಕರ ನಿಧಿಯ ಸಹಕಾರದೊಂದಿಗೆ ಹೆದ್ದಾರಿ ಜಂಕ್ಷನ್ ಬಳಿಯ ಅಪಾಯಕಾರಿ ಹೊಂಡಗಳನ್ನು ಮುಚ್ಚಿಸಿ, ಡಾಮರೀಕರಣಗೊಳಿಸುವ ಮೂಲಕ ಸಂಚಾರ ಸುಗಮಗೊಳಿಸಿದ್ದಾರೆ.
ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಅವರು 'ಪಬ್ಲಿಕ್ ನೆಕ್ಸ್ಟ್' ಜೊತೆ ಮಾತನಾಡಿ, "ಶಾಸಕರು ಹಾಗೂ ಸಂಸದರ ಸಹಕಾರದಿಂದ ಹೆದ್ದಾರಿ ಜಂಕ್ಷನ್ ಬಳಿಯ ಅಪಾಯಕಾರಿ ಹೊಂಡಗಳನ್ನು ಮುಚ್ಚಲಾಗಿದೆ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಕೂಡಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಹಳೆಯಂಗಡಿ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಕಾಮಗಾರಿಯನ್ನು ಆರಂಭಿಸಬೇಕು" ಎಂದು ಒತ್ತಾಯಿಸಿದ್ದಾರೆ.
Kshetra Samachara
17/12/2025 04:40 pm
LOADING...