ಉಡುಪಿ: ಗೃಹ ಬಂಧನದಲ್ಲಿದ್ದ ತೀರಾ ಮನೋರೋಗಿ ಎಂ. ಕಾಂ. ಪದವೀಧರೆ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಶ್ರೀ ಸಾಯಿ ಸೇವಾಶ್ರಮ ಮಂಜೇಶ್ವರ ದೈಗೋಳಿಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಯುವತಿ ಕಾರ್ಕಳ ಮೂಲದ ಅರ್ಪಿತಾ ಭಟ್ (25) (ಹೆಸರು ಬದಲಾಯಿಸಲಾಗಿದೆ) ತೀರಾ ಮಾನಸಿಕ ರೋಗಿಯಾಗಿದ್ದು ಹೆತ್ತವರಿಂದ ನಿಯಂತ್ರಿಸಲು ಅಸಾಧ್ಯವಾದಾಗ ಗೃಹ ಬಂಧನದಲ್ಲಿರಿಸದೆ ಬೇರೆ ಮಾರ್ಗವಿರಲಿಲ್ಲ. ಅನಾಮಧೇಯ ಪತ್ರವೊಂದು ಮಹಿಳಾಪರ ಇಲಾಖೆಗೆ ಬಂದಿದ್ದು ಈ ಯುವತಿಯ ಗೃಹ ಬಂಧನ ಮುಕ್ತಿ ಹಾಗೂ ಚಿಕಿತ್ಸೆಯ ಬಗ್ಗೆ ಕಾನೂನು ಕ್ರಮಕ್ಕೆ ಆಗ್ರಹಿಸಿತ್ತು. ಅನಾಮಧೇಯ ಪತ್ರದ ಮಾಹಿತಿ ಪಡೆದ ಕಾರ್ಕಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಸ್ಥಳಕ್ಕೆ ಧಾವಿಸಿ ಯುವತಿಯ ಪರಿಸ್ಥಿತಿ ಹಾಗೂ ಹೆತ್ತವರ ಅಸಹಾಯಕತೆ ನೋಡಿ ವಿಶೇಷ ಮುತುವರ್ಜಿ ವಹಿಸಿದ್ದು, ಕಾನೂನು ಪ್ರಕ್ರಿಯೆ ನಡೆಸಿ ಸಹಕರಿಸಿದರು. ಸಖಿ ಸೆಂಟರಿನಿಂದ ವಿಶು ಶೆಟ್ಟಿ ಅವರಿಗೆ ಮಾಹಿತಿ ಲಭಿಸಿದ್ದು ರಕ್ಷಣಾ ಕಾರ್ಯ ನಡೆಸಲಾಯಿತು.
ವಿಶು ಶೆಟ್ಟಿಯ ಮನವಿಗೆ ಸ್ಪಂದಿಸಿದ ದೈಗೋಳಿಯ ಸಾಯಿ ನಿಕೇತನ ಆಶ್ರಮದ ಡಾ. ಉದಯಕುಮಾರ್ ದಂಪತಿ ,ಸ್ವತಃ ಕಾರ್ಕಳಕ್ಕೆ ಬಂದು ವಿಶು ಶೆಟ್ಟಿ ಮುಖಾಂತರ ರಕ್ಷಣಾ ಕಾರ್ಯ ನಡೆಸಿ ಚಿಕಿತ್ಸೆ ಹಾಗೂ ಪುನರ್ವಸತಿಗೆ ಕರೆದುಕೊಂಡು ಹೋಗಿ ಸಹಕರಿಸಿದ್ದಾರೆ. ವಿಶು ಶೆಟ್ಟಿ ಆಶ್ರಮಕ್ಕೆ ವೈಯಕ್ತಿಕವಾಗಿ ರೂ.10,000 ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.
PublicNext
18/12/2025 06:04 pm
LOADING...