ಉಡುಪಿ: ಜಿಲ್ಲೆಯಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ಗಳಿಗೂ ಬಾಗಿಲುಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಬಾಗಿಲು ಅಳವಡಿಸಲು ನಿಗದಿತ ಸಮಯಾವಕಾಶ ನೀಡಿದ ನಂತರವೂ, ಅದನ್ನು ಪಾಲಿಸದ ವಾಹನಗಳ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಆರ್‌ಟಿಓ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಈ ಮಹತ್ವದ ನಿರ್ದೇಶನ ನೀಡಿದರು.
ಬಸ್ ನಿಲುಗಡೆ ನಿಯಮ ಉಲ್ಲಂಘನೆ
ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಲವು ಬಸ್‌ಗಳು ಬಸ್ ನಿಲ್ದಾಣಗಳನ್ನು ಹೊರತುಪಡಿಸಿ, ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರ್‌ಟಿಓ ಅಧಿಕಾರಿಗಳಿಗೆ ಈ ಮೊದಲೇ ಸೂಚಿಸಲಾಗಿದ್ದರೂ, ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಇನ್ನು ಮುಂದೆ ಪ್ರತಿ ತಿಂಗಳು ನಿಯಮ ಉಲ್ಲಂಘಿಸಿದ ಬಸ್‌ಗಳ ಮೇಲೆ ಕಡ್ಡಾಯವಾಗಿ ಪ್ರಕರಣಗಳನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದರು.
ಓವರ್‌ಲೋಡ್ ವಾಹನಗಳ ವಿರುದ್ಧ ಕ್ರಮ
ಕಾಂಕ್ರೀಟ್ ಮಿಕ್ಸಿಂಗ್ ಸಾಗಾಣಿಕೆ ಮಾಡುವ ವಾಹನಗಳು ಓವರ್‌ಲೋಡ್‌ನಿಂದಾಗಿ ಕಾಂಕ್ರೀಟ್ ರಸ್ತೆಯ ಮೇಲೆ ಎಲ್ಲೆಡೆ ಬೀಳುವುದರಿಂದ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ಅಪಘಾತಗಳು ಸಂಭವಿಸುತ್ತಿವೆ. ಇಂತಹ ವಾಹನಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
PublicNext
19/12/2025 12:10 pm
LOADING...