ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರಗ ಸಮುದಾಯದ ಮೊಟ್ಟಮೊದಲ ಡಾಕ್ಟರ್ ಈಕೆ!; ಸ್ನೇಹಾ ಸಾಧನೆ ಇಡೀ ಸಮುದಾಯಕ್ಕೆ ಸ್ಫೂರ್ತಿ

ಉಡುಪಿ : ಕರಾವಳಿಯ ಮೂಲ ನಿವಾಸಿಗಳು ಎಂದು ಕರೆಸಿಕೊಳ್ಳುವ ಕೊರಗ ಸಮುದಾಯದ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಸರಕಾರದ ಯೋಜನೆಗಳು ಇವರಿಗೆ ತಲುಪುತ್ತಿಲ್ಲ ಎನ್ನುವ ದೂರುಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯ ನಡುವೆ ಸಮುದಾಯದ ಯುವತಿಯೋರ್ವಳು ದೊಡ್ಡ ಸಾಧನೆಯೊಂದನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಕೊರಗ ಸಮುದಾಯ ಉಡುಪಿ ಜಿಲ್ಲೆಯ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದು. ಸರಕಾರ ಇವರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದರೂ ಕೂಡ ಅದು ಅರ್ಹರಿಗೆ ಸಲ್ಲುತ್ತಿಲ್ಲ ಎನ್ನುವ ದೂರುಗಳು ಇಂದು ನಿನ್ನೆಯದಲ್ಲ. ಸಮಾಜದಲ್ಲಿ ಅಸ್ಪ್ರಶ್ಯರಂತೆ ಬದುಕುತ್ತಿರುವ ಕೊರಗ ಸಮುದಾಯದ ಮಕ್ಕಳು ಬಹುತೇಕ ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣಕ್ಕೆ ತಮ್ಮ ಶೈಕ್ಷಣಿಕ ಜೀವನವನ್ನೇ ಕೊನೆಗೊಳಿಸುತ್ತಾರೆ. ಇದಕ್ಕೆ ಕಾರಣಗಳು ನೂರಾರು ಇರಬಹುದು. ಆದರೆ, ಕೊರಗ ಸಮುದಾಯದ ಜನರು ವೈದ್ಯರಾಗಬೇಕು ಎನ್ನುವ ಕನಸು ಇಂದು ನಿನ್ನೆಯದಲ್ಲ.

ಸದ್ಯ ಕುಂದಾಪುರ ತಾಲೂಕಿನ ಉಳ್ತೂರು ನಿವಾಸಿ ಗಣೇಶ್‌ ವಿ. ಮತ್ತು ಜಯಶ್ರೀ ದಂಪತಿಯ ಹಿರಿಯ ಪುತ್ರಿ ಡಾ.ಕೆ. ಸ್ನೇಹಾ ಎ.ಜೆ. ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪೂರೈಸುವ ಮೂಲಕ ಈ ಕನಸನ್ನು ನನಸು ಮಾಡಿದ್ದಾರೆ. ನ್ಯೂಡೆಲ್ಲಿ ಯುನಿವರ್ಸಿಟಿ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಎಂಡಿ ಪದವಿ ಪಡೆಯುವ ಮೂಲಕ ಸಮುದಾಯದ ಕೀರ್ತಿ ಬೆಳಗಿದ್ದಾರೆ. ಸ್ನೇಹಾ ಅವರ ತಂದೆ ಗಣೇಶ್‌ ವಿ. ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷರು. ಕಳೆದ 4 ದಶಕಗಳಿಂದ ಸಮುದಾಯದ ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡಿಕೊಂಡು ಬಂದವರು. ಕೊರಗ ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಉನ್ನತಿಗಾಗಿ ಕುಂಭಾಶಿಯಲ್ಲಿ ಕೊರಗ ಮಕ್ಕಳ ಮನೆ ಸ್ಥಾಪಿಸಿ ನಿರಂತರ ಸಮುದಾಯ ಜಾಗೃತಿಯಲ್ಲಿ ತೊಡಗಿಸಿಕೊಂಡವರು. ತಾಯಿ ಜಯಶ್ರೀ ಶಿಕ್ಷಕಿಯಾಗಿ ಸಮುದಾಯದ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡವರು.

ಡಾ. ಸ್ನೇಹ , ಬಾಲ್ಯದಿಂದಲೂ ಕಲಿಕೆಯಲ್ಲಿ ಚುರುಕಾಗಿದ್ದ ಹುಡುಗಿ. 1 ರಿಂದ 2ನೇ ತರಗತಿವರೆಗೆ ಅಂಕೋಲಾ, 3 ಮತ್ತು 4ನೇ ತರಗತಿ ಕುಂದಾಪುರ ಹೋಲಿ ರೋಜರಿ, 6ರಿಂದ ಹೈಸ್ಕೂಲ್‌ ತನಕ ಹೆಬ್ರಿ ಚಾರಾ ನವೋದಯದಲ್ಲಿ ಅಧ್ಯಯನ ನಡೆಸಿದ್ದರು. ಈಕೆಯ ಪ್ರತಿಭೆ ಗುರುತಿಸಿದ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪಿಯುಸಿಗೆ ಉಚಿತವಾಗಿ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದರು. ಪಿಯುಸಿಯಲ್ಲಿ ಶೇ.96 ಅಂಕ ಪಡೆದ ಈಕೆಗೆ ಮುಂದೆ ಮೆಡಿಕಲ್‌ ಸೀಟು ಲಭ್ಯವಾಗಿತ್ತು. ಸರಕಾರದ ಕೋಟಾದಡಿ ಕಲಿಕೆಯ ಅವಕಾಶವಿದ್ದರೂ ಹತ್ತಿರದಲ್ಲೇ ಕಲಿಕೆ ಮಾಡಬೇಕೆಂಬ ಹೆತ್ತವರ ಇಚ್ಛೆಯಿಂದ ಮಂಗಳೂರಿನ ಎ.ಜೆ. ಮೆಡಿಕಲ್‌ ಕಾಲೇಜಿಗೆ ದಾಖಲಾದರು.

5 ವರ್ಷದ ಎಂಬಿಬಿಎಸ್‌ ಪದವಿ ಪೂರ್ಣಗೊಳಿಸಿ ಈಗ ಹೊಸದಿಲ್ಲಿಯ ಯುನಿವರ್ಸಿಟಿ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಎಂಡಿ ಪದವಿ ಪಡೆದು ವೈದ್ಯಕೀಯ ಸೇವೆಗೆ ಧುಮುಕಿದ್ದಾರೆ. ಪುತ್ರಿಯ ಶೈಕ್ಷಣಿಕ ಉನ್ನತಿಗಾಗಿ ತಮ್ಮೆದೆಲ್ಲವನ್ನೂ ಧಾರೆಯೆರೆಯುವ ಮೂಲಕ ಗಣೇಶ್‌ ವಿ. ದಂಪತಿ ಸಮುದಾಯದಿಂದ ಮೊದಲ ಬಾರಿಗೆ ವೈದ್ಯೆಯನ್ನು ನಾಡಿಗೆ ಸಮರ್ಪಿಸಿದ್ದಾರೆ. ಅವರ ಕಿರಿಯ ಪುತ್ರಿ ಕೆ. ಸಾಕ್ಷಿ ಸಹ ಪ್ರತಿಭಾನ್ವಿತೆ. ಪ್ರಸ್ತುತ ಗುಜರಾತ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್ಸ್‌ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಒಟ್ಟಾರೆ, ಸಾಕಷ್ಟು ಸಮಸ್ಯೆಗಳ ಜೊತೆಗೆ ಸಮಾಜದ ಒಂದಿಷ್ಟು ಅಡೆತಡೆಗಳ ನಡುವೆಯೂ ತಳಮಟ್ಟದ ಸಮುದಾಯದಿಂದ ಬಂದ ಓರ್ವ ಯುವತಿ ಛಲದಿಂದ ಸಮುದಾಯದ ಕನಸನ್ನು ನನಸಾಗಿಸಿದ್ದಾರೆ. ಈ ಯುವತಿ ಮುಂದೆ ಸಮುದಾಯದ ಯುವ ಪೀಳಿಗೆಗೆ ಆದರ್ಶವಾಗಲಿ. ಕೊರಗ ಸಮುದಾಯದಿಂದ ಇನ್ನಷ್ಟು ಪ್ರತಿಭೆಗಳು ಹೊರಬರಲಿ ಎನ್ನುವುದು ನಮ್ಮ ಆಶಯ.

Edited By : Shivu K
PublicNext

PublicNext

17/12/2025 05:35 pm

Cinque Terre

14.19 K

Cinque Terre

0

ಸಂಬಂಧಿತ ಸುದ್ದಿ