ದಾಲ್ಹೌಸಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಖ್ಯಾತ ಪ್ರವಾಸಿ ತಾಣವಾದ ದಾಲ್ಹೌಸಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪ್ರವಾಸಿಗರಿಂದ ತುಂಬಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಪ್ರಪಾತದತ್ತ ನುಗ್ಗಿದ್ದು, ಸಾವಿನ ದವಡೆಯಿಂದ ಪ್ರವಾಸಿಗರು ಪಾರಾಗಿ ಬಂದಿದ್ದಾರೆ.
ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಪ್ರವಾಸಿ ಬಸ್‌ನಿಂದ ಪ್ರವಾಸಿಗರು ಇಳಿಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣವಿಲ್ಲದೆ ಬಸ್ ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದೆ. ಬಸ್ ವೇಗವಾಗಿ ಪ್ರಪಾತದ ಅಂಚಿಗೆ ನುಗ್ಗುತ್ತಿರುವುದನ್ನು ಕಂಡು ಒಳಗಿದ್ದ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದಾರೆ.
ಬಸ್ ಪ್ರಪಾತಕ್ಕೆ ಬೀಳುವುದು ಖಚಿತ ಎಂದು ತಿಳಿದ ತಕ್ಷಣ, ಬಸ್‌ನಲ್ಲಿದ್ದ ಏಳು ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳಲು ಕಿಟಕಿಗಳಿಂದ ಹೊರಕ್ಕೆ ಜಿಗಿದಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ 51 ಸೆಕೆಂಡುಗಳ ಈ ದೃಶ್ಯ ಎದೆಝಲ್ ಎನ್ನುವಂತಿದೆ. ಮಹಿಳಾ ಪ್ರಯಾಣಿಕರು ಚಲಿಸುತ್ತಿದ್ದ ಬಸ್ಸಿನಿಂದ ಕೆಳಕ್ಕೆ ಬೀಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿದೆ.
ಅದೃಷ್ಟವಶಾತ್, ಪ್ರಪಾತಕ್ಕೆ ಉರುಳುತ್ತಿದ್ದ ಬಸ್ ಅಲ್ಲಿದ್ದ ದೊಡ್ಡ ಮರವೊಂದಕ್ಕೆ ಸಿಲುಕಿ ನಿಂತಿದೆ. ಇದರಿಂದಾಗಿ ಕೆಳಗಿನ ಆಳವಾದ ಕಂದಕಕ್ಕೆ ಬೀಳುವುದು ತಪ್ಪಿದಂತಾಗಿದೆ. ಘಟನೆಯಲ್ಲಿ ಸುಮಾರು ಏಳು ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಪ್ರಸ್ತುತ ಈ ಭೀಕರ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
PublicNext
17/12/2025 10:43 pm
LOADING...