ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: BCM ಹಾಸ್ಟಲ್‌ದಲ್ಲಿ ಕಳಪೆ ಆಹಾರ; ವಿದ್ಯಾರ್ಥಿನಿಯರ ಗೋಳಾಟ; ಕಣ್ಣು ಮುಚ್ಚಿ ಕುಳಿತ ಅಧಿಕಾರಿ ನಾಗರತ್ನ

ಹುಬ್ಬಳ್ಳಿ: ಅದೆಷ್ಟೋ ಕನಸು ಕಂಡು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮನೆ ಬಿಟ್ಟು ಹಾಸ್ಟೆಲ್‌ಗಳಲ್ಲಿ ಇದ್ದು ಕಲಿಯುತ್ತಾರೆ. ಸರ್ಕಾರದಿಂದ ಪ್ರತಿ ತಿಂಗಳು ವಿದ್ಯಾರ್ಥಿಗಳ ಊಟಕ್ಕೆ, ಹಾಸ್ಟೆಲ್ ನಿರ್ವಹಣೆಗೆಂದು ವಾರ್ಡನ್‌ಗಳು, ತಾಲ್ಲೂಕು‌ ಮೇಲಾಧಿಕಾರಿಗಳಿಗೆ ಹಣ ಬಿಡುಗಡೆ ಆಗುತ್ತೇ. ಆದ್ರೆ, ಈ ವಾರ್ಡನ್ ಮತ್ತು ತಾಲ್ಲೂಕು ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಊಟ ನೀಡದೆ, ವಿದ್ಯಾರ್ಥಿನಿಯರ ಜೀವದ ಜೊತೆ ಆಟ ಆಡುತ್ತಿದ್ದಾರೆ. ಊಟದಲ್ಲಿ ಹುಳುಗಳು ಪತ್ತೆಯಾಗಿದ್ದು, ಹುಬ್ಬಳ್ಳಿಯ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಈ ಅವಾಂತರ ನಡೆದಿದೆ.

ಹೌದು,,, ಧಾರವಾಡ ಜಿಲ್ಲೆಯನ್ನು ವಿದ್ಯಾಕಾಶಿ ಎನ್ನುತ್ತಾರೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಓದಲು ಬರುತ್ತಾರೆ. ಹೀಗೆ ಹುಬ್ಬಳ್ಳಿ ನಗರಕ್ಕೆ ಬರುವ ಬಡ ವಿದ್ಯಾರ್ಥಿಗಳಿಗೆ ಸರ್ಕಾರದ ವಿವಿಧ ವರ್ಗಗಳ ಹಾಸ್ಟೆಲ್ ಗಳೇ ಆಸರೆ. ಆದ್ರೆ ಇಂತಹ ಬಡ ವಿದ್ಯಾರ್ಥಿನಿಯರು ಅಂದ್ರೆ ರಾಜ್ಯ ಸರ್ಕಾರಕ್ಕೆ ಯಾಕಿಷ್ಟು‌ ನಿರ್ಲಕ್ಷ್ಯ ಎನ್ನುವುದು ತಿಳಿಯದ ವಿಷಯ. ಬಡ ವಿದ್ಯಾರ್ಥಿನಿಯರ ರಾಜ್ಯ ಸರ್ಕಾರದ ವಸತಿ ನಿಲಯಗಳು ಅವ್ಯವಸ್ಥೆ ಆಗರವಾಗಿ ವಿದ್ಯಾರ್ಥಿನಿಯರ ಆರೋಗ್ಯಕ್ಕೆ ಮತ್ತು ಅಭ್ಯಾಸಕ್ಕೆ ಮಾರಕವಾಗಿದೆ. ಹುಬ್ಬಳ್ಳಿ ರಾಜ್ ನಗರದಲ್ಲಿನ ದೇವರಾಜ್ ಅರಸ್, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಊಟದಲ್ಲಿ ಹುಳುಗಳು ಬರುತ್ತಿವೆ, ಅಡುಗೆಮನೆ ಸ್ವಚ್ಛವಾಗಿಲ್ಲ. ಎಲ್ಲ ಕಳಪೆ ಮಟ್ಟದ ಆಹಾರ ನೀಡುತ್ತಿದ್ದಾರೆಂದು ಅಲ್ಲಿನ ವಿದ್ಯಾರ್ಥಿನಿಯರು ಆರೋಪ ಮಾಡುತ್ತಿದ್ದಾರೆ.

ಈ ಹಾಸ್ಟೆಲ್‌ನಲ್ಲಿ ವಿವಿಧ ಕಾಲೇಜಿನ 200 ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದಾರೆ. ನಿತ್ಯ ಈ ವಿದ್ಯಾರ್ಥಿನಿಯರಿಗೆ ನರಕ‌ ದರ್ಶನವಾಗುತ್ತಿದೆ. ತಿನ್ನುವ ಊಟದಲ್ಲಿ, ಕುಡಿಯುವ ನೀರಿನಲ್ಲಿ ದೊಡ್ಡ ದೊಡ್ಡ ಹುಳುಗಳು ಪತ್ತೆಯಾಗುತ್ತಿವೆ. ಇನ್ನೂ ಹಾಸ್ಟೆಲ್ ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಅಸ್ವಚ್ಛತೆಯ ಶೌಚಾಲಯದಿಂದಾಗಿ ವಿದ್ಯಾರ್ಥಿನಿಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು, ಹಾಸ್ಟೆಲ್ ವಾರ್ಡನ್ ಗೆ ತರಾಟೆಗೆ ತೆಗೆದುಕೊಂಡಿದ್ದು, ಇನ್ನೂ ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಹಾಸ್ಟೆಲ್ ವಾರ್ಡನ್ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಸಣ್ಣಪುಟ್ಟ ಸಮಸ್ಯೆಗಳಿವೆ. ಅದನ್ನು ‌ನಿವಾರಣೆ ಮಾಡುತ್ತೇವೆ ಅಂತ ತಿಪ್ಪೆ ಸಾರಿಸುವ ಕಾರ್ಯ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಮನೆಯಲ್ಲಿನ ಬಡತನ ಲೆಕ್ಕಿಸದೆ ಸುಂದರ ಭವಿಷ್ಯ ಕಟ್ಟಿಕೊಳ್ಳಲು ಬಂದ ವಿದ್ಯಾರ್ಥಿನಿಯರು, ಅಧಿಕಾರಿಗಳ ಮತ್ತು ಹಾಸ್ಟೆಲ್ ವಾರ್ಡನ್ ನ ನಿರ್ಲಕ್ಷ್ಯ ಧೋರಣೆಗೆ ಬಲಿಯಾಗುತ್ತಿದ್ದು, ಕೂಡಲೇ ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿಯವರು ಈ ವಿದ್ಯಾರ್ಥಿನಿಯ ಜೀವ ಕಾಪಾಡಬೇಕಿದೆ.

ಇದಷ್ಟೇ ಅಲ್ದೆ, ಹಿಂದುಳಿದ ವರ್ಗಗಳ ಈ ತಾಲ್ಲೂಕು ಅಧಿಕಾರಿ ನಾಗರತ್ನ ಅವರು ತಮಗೆ ಬೇಕಾದವರನ್ನು ಮೆರಿಟ್‌ ಲಿಸ್ಟ್‌ಲ್ಲಿ ಹೆಸರು ಬರದಿದ್ರೂ ಹಾಸ್ಟೆಲ್‌ಗಳಲ್ಲಿ ಕಳಿಸುತ್ತಿರುವ ಆರೋಪ ಕೂಡ ಕೇಳಿ ಬಂದಿದೆ. ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕಿದೆ.

-ಈರಣ್ಣ ವಾಲಿಕಾರ, ಪಬ್ಲಿಕ್‌ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/12/2025 10:29 am

Cinque Terre

21.56 K

Cinque Terre

1

ಸಂಬಂಧಿತ ಸುದ್ದಿ