ಧಾರವಾಡ: ವಯಸ್ಕ ಅನಕ್ಷರಸ್ಥರನ್ನು ಗುರುತಿಸಿ ಕನಿಷ್ಠ ಓದು ಬರಹ, ಸರಳ ಲೆಕ್ಕ ಕಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಡಿ ಇಂತಹ 3 ಕಾರ್ಯಕ್ರಮಗಳು ಜಾರಿಯಲ್ಲಿದ್ದು, ನಿರಕ್ಷರಿಗಳು ನವಸಾಕ್ಷರರಾಗಿ ಹೊರಹೊಮ್ಮುತ್ತಿದ್ದಾರೆ.
ಹೌದು! ಅಕ್ಷರ ಜ್ಞಾನವಿಲ್ಲದ ವಯಸ್ಕರನ್ನು ನವಸಾಕ್ಷರರನ್ನಾಗಿ ಮಾಡಲು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ರಾಜ್ಯಾದ್ಯಂತ 1,000 ಗ್ರಾಮ ಪಂಚಾಯಿತಿಗಳ ಸಾಕ್ಷರತಾ ಕಾರ್ಯಕ್ರಮವನ್ನು ಬಜೆಟ್ನಲ್ಲಿ ಘೋಷಿಸಿದ್ದರು. ಇದು ಈಗ ಧಾರವಾಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, ಇದರ ಜೊತೆಗೆ ನವಭಾರತ ಸಾಕ್ಷರತಾ ಕಾರ್ಯಕ್ರಮ ಮತ್ತು ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಮೂಲ ಸಾಕ್ಷರತಾ ಕಾರ್ಯಕ್ರಮವೂ ಚಾಲ್ತಿಯಲ್ಲಿದೆ.
2024-25ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಲಿಂಕ್ ಡಾಕ್ಯುಮೆಂಟ್ ಮೂಲ ಸಾಕ್ಷರತಾ ಕಾರ್ಯಕ್ರಮದಡಿ ಕಲಿಕಾ ಪ್ರಕ್ರಿಯೆ ನಡೆಸಿ ಜಿಲ್ಲೆಯ 23 ಗ್ರಾಮ ಪಂಚಾಯಿತಿಗಳ 11,828 ಜನರನ್ನು ಸಾಕ್ಷರರೆಂದು ಘೋಷಿಸಲಾಗಿದೆ. 1,000 ಗ್ರಾಮ ಪಂಚಾಯಿತಿಗಳ ಸಾಕ್ಷರತಾ ಕಾರ್ಯಕ್ರಮದಡಿ 24 ಗ್ರಾಮ ಪಂಚಾಯಿತಿ ವ್ಯಾಪ್ತಿಯ 14,365 ಅನಕ್ಷರಸ್ಥರಿಗೆ ಕಲಿಕೆ ಚಾಲ್ತಿಯಲ್ಲಿದೆ. ಇಲಾಖೆಯಿಂದ ಸದ್ಯದಲ್ಲೇ ಅಂತಿಮ ಪರೀಕ್ಷೆ ನಡೆಸಿ 14,365 ಜನರನ್ನು ನವಸಾಕ್ಷರರೆಂದು ಘೋಷಿಸಲಾಗುತ್ತದೆ. ಮೂರೂ ಕಾರ್ಯಕ್ರಮಗಳಡಿ ಜಿಲ್ಲೆಯ 72 ಗ್ರಾಮ ಪಂಚಾಯಿತಿಗಳು ಸಂಪೂರ್ಣ ಸಾಕ್ಷರ ಗ್ರಾಮಗಳೆಂದು ಘೋಷಣೆಯಾಗಿವೆ.
2025-26ನೇ ಸಾಲಿನಲ್ಲಿ 19 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ಮುಗಿದಿದ್ದು, 12,000 ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಕಲಿಕಾ ಕೇಂದ್ರಗಳು ಆರಂಭಗೊಳ್ಳಲಿದೆ ಎನ್ನುತ್ತಾರೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಹಾಯಕ ಕೆ.ಬಿ.ಕುರಹಟ್ಟಿ.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ವರೂರ ಅವರು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕಾರ್ಯಕ್ರಮಗಳ ಹೊಣೆ ಹೊತ್ತಿದ್ದಾರೆ. ತಮ್ಮ ಗ್ರಾಮದ ಅನಕ್ಷರಸ್ಥರಿಗೆ ಕನಿಷ್ಠ ಅಕ್ಷರ ಜ್ಞಾನ ಕಲಿಸುವ ಬೋಧಕರಿಗೆ ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಹೆಚ್ಚುವರಿಯಾಗಿ 1,500 ರೂಪಾಯಿ ಪ್ರೋತ್ಸಾಹಧನ ಘೋಷಿಸಿರುವುದು ವಿಶೇಷ.
ಒಟ್ಟಾರೆ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವಲ್ಲಿ ವಯಸ್ಕರ ಶಿಕ್ಷಣ ಇಲಾಖೆಯು ಅತಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದೆ. ಈ ಶಿಕ್ಷಣ ಇಲಾಖೆಯ ಈ ಕಾರ್ಯ ಹೀಗೇ ಮುಂದುವರೆಯಲಿ ಎಂಬುದೇ ನಮ್ಮ ಆಶಯ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
19/12/2025 11:16 am