ಬೆಂಗಳೂರು : ಸುಧೀರ್ ಅತ್ತಾವರ್ ನಿರ್ದೇಶನದ, ಬಹು ನಿರೀಕ್ಷಿತ “ಕೊರಗಜ್ಜ” ಚಿತ್ರದ ಎರಡನೇ ಹಾಡು ಬಿಡುಗಡೆಗೆ ಸಜ್ಜಾಗುತ್ತಿರುವಾಗಲೇ, ಚಿತ್ರತಂಡ ಮತ್ತೊಂದು ಕುತೂಹಲಕರ ರಹಸ್ಯವನ್ನು ಬಹಿರಂಗಪಡಿಸಿದೆ.
ಅಂತಾರಾಷ್ಟ್ರೀಯ ಫುಟ್‌ಬಾಲ್ ತಾರೆ, ಅರ್ಜೆಂಟೈನಾದ ಲಿಯೋನಲ್ ಮೆಸ್ಸಿಯ ಇತ್ತೀಚಿನ ಭಾರತ ಭೇಟಿಯ ಪ್ರಯುಕ್ತ ವಿನ್ಯಾಸಗೊಳಿಸಿದ್ದ “ಮೈದಾನಂ ಮೀದಾ… ಒಕ್ಕ ವೀರ…” ಎಂಬ ಎಐ ಹಾಡಿನ ಹಿಂದೆ ಕಾರ್ಯನಿರ್ವಹಿಸಿದ್ದ ಅದೇ ಕ್ರಿಯೇಟಿವ್ ತಂಡವೇ, ಇದೀಗ “ಕೊರಗಜ್ಜ” ಚಿತ್ರದ ಶ್ರೇಯ ಘೋಷಾಲ್ ಹಾಗೂ ಅರ್ಮಾನ್ ಮಲಿಕ್ ಹಾಡಿರುವ ಗೀತೆಯನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ವಿನೂತನವಾಗಿ ರೂಪಿಸಿದೆ.
ಸುಧೀರ್ ಅತ್ತಾವರ್ ಅವರ ಸಾಹಿತ್ಯ “ಗಾಳಿ ಗಂಧ… ತೀಡಿ ತಂದ…”ಇದಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಮನಮೋಹಕ ಮೆಲೋಡಿ ಟ್ಯೂನ್ ನೀಡಿದ್ದಾರೆ. ಹಾಡಿನ ಟ್ರ್ಯಾಕ್ ಕೇಳಿದ ಕೂಡಲೇ ಶ್ರೇಯ ಘೋಷಾಲ್ ಹಾಡಲು ಒಪ್ಪಿಕೊಂಡಿದ್ದೇ, ಈ ಗೀತೆಯ ವಿಶೇಷತೆಯನ್ನು ಹೇಳುತ್ತದೆ.
ಇತ್ತೀಚೆಗೆ ಹಾಡಿನ ಸಾಹಿತ್ಯವನ್ನು ಬಿಡುಗಡೆಗೊಳಿಸಿದ್ದ ಚಿತ್ರತಂಡ, ಇದೀಗ ಈ ಹಾಡಿನಲ್ಲಿ ಕಾಣಿಸಿಕೊಳ್ಳುವ ಮುಗ್ಧ ಪ್ರೇಮಿಗಳ ಸ್ಟನ್ನಿಂಗ್ ಸ್ಟಿಲ್ ಅನ್ನು ಬಿಡುಗಡೆ ಮಾಡಿ, “ಕೊರಗಜ್ಜ” ಚಿತ್ರಕ್ಕೆ ಮತ್ತೊಂದು ಹೊಸ ಆಯಾಮವಿದೆ ಎಂಬುದನ್ನು ಸೂಚಿಸಿದೆ.
“ಕೊರಗಜ್ಜ” ಚಿತ್ರದಲ್ಲಿ ಪ್ರಣಯದ ಸನ್ನಿವೇಶವೇ ಇರಬಹುದೇ? ಎಂಬ ಪ್ರಶ್ನೆ ಕೆಲವರನ್ನು ಅಚ್ಚರಿಗೊಳಿಸಬಹುದು. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ, ತ್ರಿವಿಕ್ರಮ ನಿರ್ಮಾಣದಲ್ಲಿ, ವಿದ್ಯಾಧರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರ ಬಿಡುಗಡೆಗೊಂಡ ಬಳಿಕವೇ ದೊರಕಲಿದೆ.ಅಷ್ಟರೊಳಗೆ, ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಹೊಸ ಹೊಸ ಅಪ್‌ಡೇಟ್ಸ್‌ಗಳು ಸಿನಿಪ್ರೇಮಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿದೆ.
ಅತೀವ ವಿನೂತನ ಸ್ಟ್ರಿಂಗ್ಸ್ ಮತ್ತು ವಾದ್ಯ ಸಂಯೋಜನೆಯೊಂದಿಗೆ ಟ್ಯೂನ್ ಮಾಡಲಾದ “ಕೊರಗಜ್ಜ” ಚಿತ್ರದ ಎರಡನೇ ಹಾಡು, ಸಂಗೀತ ಲೋಕದಲ್ಲಿ ಹೊಸ ಹವಾ ಎಬ್ಬಿಸುವುದು ನಿಶ್ಚಯ.
PublicNext
18/12/2025 12:48 pm