ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಲ್ಫಿ ಹುಚ್ಚಿಗೆ ಬಲಿ : ಕಾಡಾನೆ ದಾಳಿಗೆ ಯುವಕನ ದುರಂತ ಅಂತ್ಯ!

ಜಾರ್ಖಂಡ್‌ನ ರಾಮಗಢದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದು, ಸೆಲ್ಫಿ ಹುಚ್ಚುತನ ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಾಮಾನ್ಯವಾಗಿ ಹುಲಿ, ಸಿಂಹಗಳಿಗಿಂತಲೂ ಶಾಂತ ಸ್ವಭಾವದ ಪ್ರಾಣಿ ಎಂದು ನಂಬಲಾಗುವ ಆನೆಗಳು, ಕೆರಳಿದಾಗ ಅತ್ಯಂತ ಅಪಾಯಕಾರಿ ಎಂಬುದನ್ನು ತಜ್ಞರು ಪದೇ ಪದೇ ಹೇಳುತ್ತಾರೆ. ಕಾಡಾನೆ ಸಮೀಪಕ್ಕೆ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಯುವಕನನ್ನು ಆನೆ ತುಳಿದು ಸೊಂಡಿಲಿನಲ್ಲಿ ಎತ್ತಿ ಬಡಿದು ಕೊಂದಿರುವ ಈ ಭಯಾನಕ ಘಟನೆ ಎಲ್ಲರ ಬೆನ್ನುಮೂಳೆ ನಡುಗಿಸಿದೆ.

ರಾಮಗಢದಿಂದ ಬಂದಿರುವ ಈ ಆಘಾತಕಾರಿ ವಿಡಿಯೋದಲ್ಲಿ, ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟದಿಂದ ಕಾಡಾನೆ ಬಳಿ ಹೋಗಿದ್ದಾನೆ. ಈ ವೇಳೆ ಆನೆ ಏಕಾಏಕಿ ದಾಳಿ ಮಾಡಿ ಆತನನ್ನು ಕೊಂದಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಭಯಾನಕ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

22 ಸೆಕೆಂಡುಗಳ ಈ ವಿಡಿಯೋದಲ್ಲಿ ಕಾಡಾನೆಯ ಕೋಪ ಮನುಷ್ಯನ ಮೇಲೆ ಹೇಗೆ ತೀರಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಆನೆ ಮೊದಲಿಗೆ ತನ್ನ ಕಾಲಿನಿಂದ ಯುವಕನನ್ನು ತುಳಿದು ಹತ್ಯೆ ಮಾಡಿದೆ. ಅಷ್ಟಕ್ಕೆ ಸುಮ್ಮನಾಗದ ಆನೆ, ಸೊಂಡಿಲಿನಲ್ಲಿ ಯುವಕನನ್ನು ಸುತ್ತಿಕೊಂಡು ಬಟ್ಟೆ ಯುವಂತೆ ಎಸೆಯಲು ಪ್ರಾರಂಭಿಸಿದೆ. ಆ ಯುವಕ ಅಷ್ಟರಲ್ಲಾಗಲೇ ಮೃತಪಟ್ಟಿದ್ದರೂ, ಆನೆಯ ಕೋಪ ಶಾಂತವಾಗಿರಲಿಲ್ಲ. ದೇಹವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿದ ನಂತರ, ಅದನ್ನು ಮತ್ತೆ ಎತ್ತಿ ಎಸೆಯಲಾರಂಭಿಸಿತು. ಸುತ್ತಮುತ್ತಲಿನ ಜನರ ವ್ಯಾಪಕ ಕಿರುಚಾಟ ಮತ್ತು ಕೂಗಾಟ ಕೇಳಿಬಂದರೂ ಆನೆಗೆ ಜಗ್ಗಲಿಲ್ಲ. ಈ ಘಟನೆಯು ಇಡೀ ಪ್ರದೇಶದಲ್ಲಿ ವ್ಯಾಪಕ ಭೀತಿಯನ್ನುಂಟು ಮಾಡಿದೆ.

ಅರಣ್ಯ ಇಲಾಖೆಯ ಪ್ರಕಾರ, ಕೆಲವು ದಿನಗಳ ಹಿಂದೆ ಸುಮಾರು 24 ಆನೆಗಳು ಜನವಸತಿ ಪ್ರದೇಶಗಳಿಗೆ ದಾರಿ ತಪ್ಪಿ ಬಂದಿದ್ದವು. ಆಹಾರ ಅರಸುತ್ತಾ ಈ ಆನೆ ಹಿಂಡು ಹೊಲಗಳು ಮತ್ತು ಹಳ್ಳಿಗಳಿಗೆ ಅಲೆದಾಡಲು ಪ್ರಾರಂಭಿಸಿತ್ತು. ಅರಣ್ಯ ಇಲಾಖೆ ಅವುಗಳನ್ನು ಮತ್ತೆ ಕಾಡಿಗೆ ಹಿಂತಿರುಗಿಸುವ ಕೆಲಸದಲ್ಲಿ ನಿರತವಾಗಿತ್ತು. ಮಂಗಳವಾರ ಸಂಜೆ, ಘಾಟೋ ಪೊಲೀಸ್ ಠಾಣೆಯ ಅರಾ ಸರುಬೇದಾ ಪ್ರದೇಶದಲ್ಲಿ ಕೆಲವು ಆನೆಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಜನಸಮೂಹ ಜಮಾಯಿಸಿತ್ತು. ಆನೆಗಳಿಂದ ದೂರವಿರಲು ಅರಣ್ಯ ಇಲಾಖೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಕೆಲವು ಯುವಕರು 'ರೀಲ್ಸ್' ಮಾಡುವ ಹುಚ್ಚುತನಕ್ಕೆ ಬಿದ್ದಿದ್ದರು.

ಮೃತ ಯುವಕನನ್ನು 35 ವರ್ಷದ ಅಮಿತ್ ರಾಜ್ವರ್ ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಬರುವ ಹೊತ್ತಿಗೆ ಅಮಿತ್ ಸಾವನ್ನಪ್ಪಿದ್ದ. ಕಾಡು ಆನೆಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ತಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಿಕೊಳ್ಳದಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Edited By : Nirmala Aralikatti
PublicNext

PublicNext

19/12/2025 02:03 pm

Cinque Terre

14.44 K

Cinque Terre

0

ಸಂಬಂಧಿತ ಸುದ್ದಿ