ಕುಂದಾಪುರ: ಚೈತ್ರಾ ಕುಂದಾಪುರ ಅವರ ತಂದೆಗೆ ಯಾವುದೇ ರೀತಿ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರ ಮನೆಯಲ್ಲಿ ನಿರ್ಭೀತಿಯಿಂದ ಇರಲು ಅವಕಾಶ ಮಾಡಿಕೊಡಬೇಕೆಂದು ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ಮಾಡಿದೆ.
ಬಾಲಕೃಷ್ಣ ಅವರು ಪುತ್ರಿ ಚೈತ್ರಾ ಕುಂದಾಪುರ ಅವರಿಂದ ಅನ್ಯಾಯ ಆಗುತ್ತಿದೆ. ನನ್ನ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಕೋರಿ ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ ಅನ್ವಯ ಪರಿಹಾರ ಕೋರಿ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧದ ಕೋರ್ಟ್ ತೀರ್ಪು ನೀಡಿದೆ.
ತಂದೆಗೆ ಮಗಳು ಯಾವುದೇ ರೀತಿ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರ ಮನೆಯಲ್ಲಿ ನಿರ್ಭೀತಿಯಿಂದ ಇರಲು ಅವಕಾಶ ಮಾಡಿಕೊಡಬೇಕು. ಅವರ ಸ್ವತ್ತಿನ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ಮುಚ್ಚಳಿಕೆ ನೀಡಬೇಕು ಎಂದು ಎಂದು ಇಲ್ಲಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ಮಾಡಿದೆ.
ಕೆಲ ಸಮಯ ಹಿಂದಷ್ಟೇ ಚೈತ್ರಾ ಕುಂದಾಪುರ ಅವರು ಮದುವೆಯಾದ ಬಳಿಕ ಅವರ ತಂದೆ ಬಾಲಕೃಷ್ಣ ನಾಯಕ್ ಮಗಳ ವಿರುದ್ಧವೇ ಸಾಲು ಸಾಲು ಆರೋಪಗಳನ್ನು ಮಾಡಿದ್ದರು.
ಚೈತ್ರಾ ಅವರ ಅವ್ಯವಹಾರದಿಂದ ಬೇಸತ್ತು 71 ವರ್ಷದ ತಾನು ಮನೆ ಬಿಟ್ಟು ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆ ಸೇರಿದ್ದು ಇನ್ನೊಬ್ಬ ಮಗಳನ್ನು ಭೇಟಿ ಮಾಡಲು ಆಗಾಗ ಮನೆಗೆ ಬರುತ್ತಿದ್ದೆ. ಆಗ ಮಡದಿ ಹಾಗೂ ಮಗಳು ಸ್ವಂತ ಮನೆಗೆ ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲ. ಸಾರ್ವಜನಿಕವಾಗಿ ತನ್ನ ಮಾನ ಹಾನಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಮನೆಯಲ್ಲಿ ವಾಸಿಸಲು ರಕ್ಷಣೆ ಬೇಕು. ಸಂಬಂಧಪಟ್ಟ ಆಸ್ತಿಯಿಂದ ಬರುವ ಬಾಡಿಗೆ ತನಗೆ ದೊರೆಯಬೇಕು, ಈ ಮನೆಯಲ್ಲಿ ವಾಸಿಸಲು ರಕ್ಷಣೆ ಬೇಕು. ಸಂಬಂಧಪಟ್ಟ ಆಸ್ತಿಯಿಂದ ಬರುವ ಬಾಡಿಗೆ ತನಗೆ ದೊರೆಯಬೇಕು ಎಂದು ಅವರು ಪ್ರಕರಣ ದಾಖಲಿಸಿದ್ದರು.
ವಾದ ವಿವಾದ ಆಲಿಸಿದ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್. ಬಾಡಿಗೆ ಹಣದ ಕುರಿತು ಯಾವುದೇ ದಾಖಲೆ ಸಲ್ಲಿಸಿಲ್ಲ. ಪ್ರಸ್ತುತ ಈ ಮನೆಯಲ್ಲಿ ಚೈತ್ರಾ ವಾಸಿಸುತ್ತಿಲ್ಲ. ಆದರೆ ಈ ಹಿಂದೆ ಪ್ರಕರಣ ದಾಖಲಾಗಿದೆ. ಆದ್ದರಿಂದ ಇನ್ನು ಮುಂದೆ ತಂದೆ ಅವರ ಮನೆಯಲ್ಲಿ ವಾಸಿಸಲು ತೊಂದರೆ ಮಾಡಬಾರದು. ದೈಹಿಕ, ಮಾನಸಿಕ ಹಿಂಸೆ ನೀಡಬಾರದು ಎಂದು ಆದೇಶ ನೀಡಿದ್ದಾರೆ.
ಬಾಲಕೃಷ್ಣ ನಾಯಕ್ ಪರ ನ್ಯಾಯವಾದಿ ಕೆ.ಸಿ. ಶೆಟ್ಟಿ ಕುಂದಾಪುರ ವಾದಿಸಿದ್ದರು.
PublicNext
19/12/2025 05:45 pm