ಕಾರವಾರ: ಕದ್ರಾ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚಿರಾಗ್ ಸಿದ್ಧಿಯನ್ನು ಚೆನ್ನೈನಲ್ಲಿ ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ದೀಪನ್, ಆರೋಪಿಯ ಪತ್ತೆಗಾಗಿ ಮೂವರು ಇನ್ಸ್‌ಪೆಕ್ಟರ್‌ಗಳು ಹಾಗೂ ಆರು ಪಿಎಸ್‌ಐಗಳು ಸೇರಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಚಿರಾಗ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆತನ ಸಂಬಂಧಿ ಸುವರ್ಣ ಹಾಗೂ ನಿತಿನ್ ಗಾವ್ಕರ್ ಅವರ ಮೇಲೆಯೂ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದರು. ಅಲ್ಲದೆ, ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಆರೋಪಿ ಚಿರಾಗ್ ತಪ್ಪಿಸಿಕೊಳ್ಳುವ ಸಲುವಾಗಿ ಬೆಂಗಳೂರು, ಪುಣೆ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ಓಡಾಡಿದ್ದು ತನಿಖೆಯಿಂದ ತಿಳಿದುಬಂದಿದೆ. ಮರು ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಆರೋಪಿ ಮತ್ತು ಮೃತರ ಮೊಬೈಲ್ ಕರೆಗಳ ವಿವರಗಳ ತನಿಖೆ ಪೂರ್ಣಗೊಂಡ ನಂತರ ಪ್ರಕರಣದ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ಎಸ್ಪಿ ದೀಪನ್ ಮಾಹಿತಿ ನೀಡಿದರು.
ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪಿಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದೆ. ಈ ಲೋಪದ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಭರವಸೆ ನೀಡಿದರು.
PublicNext
30/01/2026 10:46 pm