ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ, ದೇವಿಯ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವವು ಫೆಬ್ರವರಿ 2 ರಿಂದ 4 ರವರೆಗೆ ಮೂರು ದಿನಗಳ ಕಾಲ ಅತಿ ವಿಜೃಂಭಣೆಯಿಂದ ನಡೆಯಲಿದೆ. ಈ ಕುರಿತು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಆನಂದ ಎಚ್. ನಾಯ್ಕ ಮಾಹಿತಿ ನೀಡಿದ್ದಾರೆ.
ದೇವಾಲಯದ ಇತಿಹಾಸ
ಕೋಲಸಿರ್ಸಿ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನಂದ ಎಚ್. ನಾಯ್ಕ, ಶ್ರೀ ಮಾರಿಕಾಂಬಾ ದೇವಿ ಕೋಲಸಿರ್ಸಿ ಗ್ರಾಮದ ಗ್ರಾಮದೇವತೆಯಾಗಿದ್ದು, ನೂರಾರು ವರ್ಷಗಳಿಂದ ಪೂರ್ವಜರಿಂದ ಪೂಜಿಸಲ್ಪಡುತ್ತಿದ್ದಾಳೆ. ಮೊದಲು ಬೆಟ್ಟ ಕಣಗಲ ಮರದ ಅಡಿಯ ಕಟ್ಟೆಯ ಮೇಲೆ ಪೂಜೆಗೊಳ್ಳುತ್ತಿದ್ದ ದೇವಿಗೆ ನಂತರ ಗರ್ಭಗುಡಿ ನಿರ್ಮಿಸಲಾಯಿತು. ಪ್ರತಿ ಏಳು ವರ್ಷಗಳಿಗೊಮ್ಮೆ ಇಲ್ಲಿ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು ಎಂದು ತಿಳಿಸಿದರು.
ನೂತನ ದೇವಾಲಯ ನಿರ್ಮಾಣ
ಶ್ರೀ ಮಾರಿಕಾಂಬಾ ಸಮಿತಿ ಹಾಗೂ ಗ್ರಾಮಸ್ಥರ ಒಮ್ಮತದ ಅಭಿಪ್ರಾಯದಂತೆ, ದೇವಿಯಲ್ಲಿ ಪ್ರಸಾದ ರೂಪದಲ್ಲಿ ಅಪ್ಪಣೆ ಪಡೆದು ನೂತನ ದೇವಾಲಯ ನಿರ್ಮಿಸಲು ನಿರ್ಧರಿಸಲಾಯಿತು. ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಯೋಜಿಸಲಾಗಿದ್ದು, ಗ್ರಾಮಸ್ಥರು ಹಾಗೂ ವಿವಿಧೆಡೆಯ ಭಕ್ತರಿಂದ ವಂತಿಗೆ ಸಂಗ್ರಹಿಸಿ ಯಶಸ್ವಿಯಾಗಿ ದೇವಾಲಯ ನಿರ್ಮಾಣ ಪೂರ್ಣಗೊಂಡಿದೆ.
ಮೂರು ದಿನಗಳ ಕಾರ್ಯಕ್ರಮಗಳ ವಿವರ
ದೇವಿಯ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದತ್ತಾತ್ರೇಯ ಭಟ್ಟ ಅವರ ವೈದಿಕ ಮಾರ್ಗದರ್ಶನ ಹಾಗೂ ದೇವಾಲಯದ ಪೂಜಾರಿ ಲೋಕೇಶ್ ಬಡಗಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫೆಬ್ರವರಿ 2, ಶುಕ್ರವಾರ: ಬೆಳಿಗ್ಗೆ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ, ಶ್ರೀ ಮಾರಿಕಾಂಬಾ ಮೂರ್ತಿಯ ಭವ್ಯ ಮೆರವಣಿಗೆ, ಶುದ್ಧಿಕಾರ್ಯ, ಆಲಯ ಗೃಹಣ, ಬ್ರಹ್ಮಕೂರ್ಚ ಹೋಮ ಸಹಿತ ಬ್ರಹ್ಮ ಕಲಶ ಸ್ಥಾಪನೆ ಪೂಜೆ, ಪ್ರಾಸಾದ ವಾಸ್ತುಹೋಮ ಹಾಗೂ ತ್ರಿಪಂಚಾತ್ ಅಧಿವಾಸಗಳು ನಡೆಯಲಿವೆ.
ಫೆಬ್ರವರಿ 3, ಶನಿವಾರ: ಬೆಳಿಗ್ಗೆ 9:30 ರಿಂದ 11 ಗಂಟೆಯೊಳಗೆ ರತ್ನನ್ಯಾಸ, ಶ್ರೀ ಮಾರಿಕಾಂಬಾ ದೇವಿ ಮತ್ತು ಕಲಶ ಪ್ರತಿಷ್ಠೆ, ಪ್ರತಿಷ್ಠಾಪನಾ ಕಲಾವೃದ್ಧಿ ಹೋಮಾದಿಗಳು ಜರುಗಲಿವೆ.
ಫೆಬ್ರವರಿ 4, ಭಾನುವಾರ: ಶಾಂತಿಕ ಪೌಷ್ಟಿಕ ಹೋಮಾದಿಗಳು, ಮಹಾಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ, ಮಹಾನೈವೇದ್ಯ, ಮಹಾ ಮಂಗಳಾರತಿ ಹಾಗೂ ಅನ್ನಪೂರ್ಣೇಶ್ವರಿ ಪೂಜೆ ನಡೆಯಲಿದೆ.
ಮಂಗಳವಾರ ಮತ್ತು ಬುಧವಾರದಂದು ಅನ್ನಸಂತರ್ಪಣೆ ಹಾಗೂ ತೀರ್ಥ-ಪ್ರಸಾದ ವಿತರಣೆ ಇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕೆಂದು ಸಮಿತಿಯು ಮನವಿ ಮಾಡಿದೆ.
ಯಕ್ಷಗಾನ ಪ್ರದರ್ಶನ
ಫೆಬ್ರವರಿ 4 ರಂದು ರಾತ್ರಿ 9:30 ಕ್ಕೆ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಹಾಲಾಡಿ ಇವರಿಂದ 'ಸಂಪೂರ್ಣ ದೇವಿ ಮಹಾತ್ಮೆ' ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯ ಗಣ್ಯರು
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ಕೆ.ಆರ್. ವಿನಾಯಕ ಅವರು, ತಾಲ್ಲೂಕಿನ ಎಲ್ಲಾ ಭಕ್ತರು ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಹ್ವಾನಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ವಾಸುದೇವ ಎಸ್. ನಾಯ್ಕ, ಉಪಾಧ್ಯಕ್ಷ ರಾಮಚಂದ್ರ ಐ. ನಾಯ್ಕ, ಸಹ ಕಾರ್ಯದರ್ಶಿ ರಮೇಶ್ ಎಂ. ನಾಯ್ಕ, ಮಧುಕರ್ ಎಸ್. ನಾಯ್ಕ ಸೇರಿದಂತೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಕಟ್ಟಡ ನಿರ್ಮಾಣ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
PublicNext
31/01/2026 07:28 am