ಹಾಸನ: ನಿವೇಶನ ಒತ್ತುವರಿ ವಿವಾದ – ನಟ ಯಶ್ ತಾಯಿ ಪುಷ್ಪಾ ಮತ್ತು ದೇವರಾಜು ನಡುವೆ ತೀವ್ರ ಜಟಾಪಟಿ ಹಾಸನ: ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೇಶನ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಹಾಗೂ ಜಿಪಿಎ (GPA) ಹೋಲ್ಡರ್ ದೇವರಾಜು ನಡುವಿನ ವಿವಾದ ಇದೀಗ ತಾರಕಕ್ಕೇರಿದೆ. ಈ ಸಂಬಂಧ ಯಶ್ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜು ನಡುವೆ ಮಾತಿನ ಚಕಮಕಿ ನಡೆದಿದೆ.
ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಿದ್ಯಾನಗರದಲ್ಲಿರುವ ಯಶ್ ಅವರ ಮನೆ ಪಕ್ಕದ ಜಾಗಕ್ಕೆ ಸಂಬಂಧಿಸಿದಂತೆ ಈ ಕಿತ್ತಾಟ ನಡೆಯುತ್ತಿದೆ. ಮೈಸೂರು ಮೂಲದ ಲಕ್ಷ್ಮಮ್ಮ ಎಂಬುವವರಿಗೆ ಸೇರಿದ ಸುಮಾರು 1,500 ಚದರ ಅಡಿ ಜಾಗವನ್ನು ಪುಷ್ಪಾ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬುದು ದೇವರಾಜು ಅವರ ಗಂಭೀರ ಆರೋಪವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜು ಅವರು ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಹಾಸನದ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯವು ದೇವರಾಜು ಅವರ ಪರವಾಗಿ ಆದೇಶ ನೀಡಿತ್ತು. ಈ ಆದೇಶದ ಅನ್ವಯ, ಜನವರಿ ಮೊದಲ ವಾರದಲ್ಲಿ ಜಿಪಿಎ ಹೋಲ್ಡರ್ ದೇವರಾಜು ಅವರು ಜೆಸಿಬಿ ಮೂಲಕ ವಿವಾದಿತ ಕಾಂಪೌಂಡ್ ಅನ್ನು ಧ್ವಂಸಗೊಳಿಸಿದ್ದರು.
ಇದು ಎರಡೂ ತಂಡಗಳ ನಡುವೆ ನೇರ ಸಂಘರ್ಷಕ್ಕೆ ನಾಂದಿ ಹಾಡಿತು. ನಾವು 6 ವರ್ಷಗಳ ಹಿಂದೆಯೇ ಈ ಜಾಗವನ್ನು ಅಧಿಕೃತವಾಗಿ ಖರೀದಿಸಿದ್ದೇವೆ. ನಮ್ಮ ಬಳಿ ಎಲ್ಲಾ ಇ-ಖಾತೆ ಮತ್ತು ಅಗತ್ಯ ದಾಖಲೆಗಳಿವೆ. ನಮಗೆ ಯಾವುದೇ ಕೋರ್ಟ್ ನೋಟಿಸ್ ಬಂದಿಲ್ಲ. ನಾವಿಲ್ಲದ ಸಮಯದಲ್ಲಿ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಕೆಡವಲಾಗಿದೆ ಎಂದು ಯಶ್ ತಾಯಿ ಪುಷ್ಪಾ ಆರೋಪಿಸಿದ್ದಾರೆ.
PublicNext
31/01/2026 03:54 pm
LOADING...