ಹಾಸನ: ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ, ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಜಿಪಿಎ ಹೋಲ್ಡರ್ ದೇವರಾಜ್ ಹಾಗೂ ಪುಷ್ಪ ಎಂಬುವವರ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ವಿವಾದಿತ ಜಾಗದಲ್ಲಿಂದು ದೇವರಾಜ್ ಕಡೆಯವರು ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದಾಗ, ಪುಷ್ಪ ಮತ್ತು ಅವರ ಬೆಂಬಲಿಗರು ಇದನ್ನು ತೀವ್ರವಾಗಿ ವಿರೋಧಿಸಿದರು. ಈ ವೇಳೆ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ವಿಷಯ ತಿಳಿಯುತ್ತಿದ್ದಂತೆ ಎರಡೂ ಕಡೆಯ ಪರವಾಗಿ ಹತ್ತಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಹೈಡ್ರಾಮ ಸೃಷ್ಟಿಯಾಗಿತ್ತು.
ಪೊಲೀಸರ ಮಧ್ಯಪ್ರವೇಶ
ಗಲಾಟೆಯ ಕುರಿತು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಲು ಮಧ್ಯಪ್ರವೇಶಿಸಿದರು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಯಾವುದೇ ನಿರ್ಮಾಣ ಕಾಮಗಾರಿ ನಡೆಸದಂತೆ ಸೂಚಿಸಿದ ಪೊಲೀಸರು, ಕೂಡಲೇ ಕೆಲಸಗಾರರನ್ನು ಅಲ್ಲಿಂದ ವಾಪಸ್ ಕಳುಹಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದರು. ಸದ್ಯಕ್ಕೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಎರಡೂ ಕಡೆಯವರು ಪೊಲೀಸ್ ಠಾಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನ್ಯಾಯಾಲಯದ ತೀರ್ಪು ಬರುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಪೊಲೀಸರು ನಿರ್ದೇಶನ ನೀಡಿದ್ದಾರೆ.
PublicNext
01/02/2026 04:39 pm
LOADING...