ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಟ್ಟೂರು: ಮಗನಿಂದಲೇ ಹೆತ್ತವರ, ಸಹೋದರಿ ಹತ್ಯೆ - ದೇಹ ತುಂಡರಿಸಿದ ಕ್ರೌರ್ಯಕ್ಕೆ ಬೆಚ್ಚಿಬಿದ್ದ ರಾಜ್ಯದ ಜನ.!

ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಒಂದೇ ಮನೆಯಲ್ಲಿ ತಂದೆ, ತಾಯಿ ಹಾಗೂ ಸಹೋದರಿಯನ್ನು ಭೀಕರವಾಗಿ ಕೊಲೆ ಮಾಡಿದ ಆಘಾತಕಾರಿ ಸತ್ಯ ಪೊಲೀಸ್ ಸ್ಥಳ ಮಹಜರು ವೇಳೆ ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಆರೋಪಿ ಅಕ್ಷಯ್ ಎಂಬಾತನೇ ಎಸಗಿದ್ದಾನೆ.

ಆರೋಪಿ ಅಕ್ಷಯ್, ತನ್ನ ಹೆತ್ತ ತಂದೆ-ತಾಯಿ ಭೀಮರಾಜ್, ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾರನ್ನು ಕೊಲೆ ಮಾಡಿ, ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯ ಹಾಲ್‌ನಲ್ಲೇ ಗುಂಡಿ ತೋಡಿ ಹೂತುಹಾಕಿದ ಆಘಾತಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.

ದೇಹಗಳ ಪತ್ತೆ ಹಾಗೂ ಸಾರ್ವಜನಿಕರ ಆಕ್ರೋಶ

ಕೊಲೆಯಾದ ಭೀಮರಾಜ್ (ತಂದೆ), ಜಯಲಕ್ಷ್ಮಿ (ತಾಯಿ) ಮತ್ತು ಅಮೃತಾ (ಸಹೋದರಿ) ಅವರ ಮೃತದೇಹಗಳನ್ನು ಮನೆಯ ಹಾಲ್‌ನಲ್ಲಿ ತೋಡಿದ್ದ 4 ಅಡಿ ಆಳ, 2 ಅಡಿ ಅಗಲದ ಗುಂಡಿಯಿಂದ ಹೊರತೆಗೆಯಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಂಬ್ಯುಲೆನ್ಸ್‌ನಲ್ಲಿ ದೇಹಗಳನ್ನು ತರುತ್ತಿದ್ದಂತೆ ಸ್ಥಳದಲ್ಲಿ ಅಪಾರ ಸಂಖ್ಯೆಯ ಜನಸಮೂಹ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿತು.

ಕೊಲೆಗಳ ಭೀಕರ ಸರಣಿ

ಕಳೆದ ನಾಲ್ಕು ದಿನಗಳ ಹಿಂದೆ ಈ ಸರಣಿ ಕೊಲೆಗಳು ನಡೆದಿವೆ. ಪಾಪಿ ಮಗ ಅಕ್ಷಯ್, ಮೊದಲು ಹೆತ್ತ ತಾಯಿ ಜಯಲಕ್ಷ್ಮಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಮಧ್ಯಾಹ್ನ ಕಾಲೇಜಿನಿಂದ ಮನೆಗೆ ಬಂದ ತಂಗಿ ಅಮೃತಾಗೆ "ನಿನಗೊಂದು ಸರ್ಪ್ರೈಸ್ ಇದೆ, ಬಾ" ಎಂದು ಹೇಳಿ ಮಲಗುವ ಕೋಣೆಗೆ ಕರೆದೊಯ್ದು ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಸಂಜೆ ಮನೆಗೆ ಬಂದ ತಂದೆ ಭೀಮರಾಜ್ ಅವರಿಗೂ "ನಿಮಗೂ ಸರ್ಪ್ರೈಸ್ ಇದೆ ಅಪ್ಪ" ಎಂದು ಹೇಳಿ ಮನೆಯೊಳಗೆ ಕರೆದು ಕೊಲೆ ಮಾಡಿದ್ದಾನೆ.

ಮೂವರನ್ನೂ ಕೊಲೆ ಮಾಡಿದ ಬಳಿಕ, ಅಕ್ಷಯ್ ಬೆಂಗಳೂರಿಗೆ ತೆರಳಿದ್ದ. ಅಲ್ಲಿ ಪೂರ್ವಯೋಜಿತ ಪ್ಲಾನ್ ರೂಪಿಸಿಕೊಂಡು ಮತ್ತೆ ಮನೆಗೆ ಮರಳಿದ್ದಾನೆ. ಮನೆಯ ಹಾಲ್‌ನಲ್ಲಿ ಗುಂಡಿ ತೋಡಿ, ಮೊದಲು ತಾಯಿಯ ದೇಹವನ್ನು ಹೂತಿದ್ದಾನೆ. ನಂತರ ತಂಗಿಯ ದೇಹವನ್ನೂ ಹೂತಿದ್ದಾನೆ. ಆದರೆ, ತಂದೆಯ ದೇಹವನ್ನು ಗುಂಡಿಯಲ್ಲಿ ಹೂಳಲು ಕಷ್ಟವಾದಾಗ, ತಂಗಿಯ ದೇಹವನ್ನು ಹೊರತೆಗೆದು, ಕಬ್ಬು ಕತ್ತರಿಸುವ ಯಂತ್ರದ ಮೂಲಕ ತಂದೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಗುಂಡಿಯಲ್ಲಿ ಹಾಕಿದ್ದಾನೆ. ಬಳಿಕ ತಂಗಿಯ ದೇಹವನ್ನು ಮತ್ತೆ ಹೂತಿಟ್ಟಿದ್ದಾನೆ. ಹೆತ್ತ ತಂದೆ-ತಾಯಿ ಹಾಗೂ ಸಹೋದರಿಯನ್ನು ಇಷ್ಟು ಭೀಕರವಾಗಿ ಕೊಲೆ ಮಾಡಿ, ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಹೂತುಹಾಕಿದ ಅಕ್ಷಯ್‌ನ ಈ ಕೃತ್ಯ ಮನುಕುಲವೇ ತಲೆತಗ್ಗಿಸುವಂತಿದೆ.

Edited By : Shivu K
PublicNext

PublicNext

31/01/2026 04:12 pm

Cinque Terre

13.33 K

Cinque Terre

0

ಸಂಬಂಧಿತ ಸುದ್ದಿ