ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಿತಿಮೀರಿರುವ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ನಗರಸಭೆ ಈಗ ವಿನೂತನ ಹಾಗೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಇವುಗಳ ನಿಯಂತ್ರಣಕ್ಕಾಗಿ ಈವರೆಗೆ ಏಳು ಬಾರಿ ಟೆಂಡರ್ ಕರೆದಿದ್ದರೂ ಯಾವುದೇ ಸಂಸ್ಥೆಗಳು ಮುಂದೆ ಬಾರದಿರುವುದು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕೆ ಬೀದಿ ನಾಯಿಗಳನ್ನು ದತ್ತು ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತಾದರೂ, ಅದಕ್ಕೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆಯೇ ನೇರವಾಗಿ ಕಾರ್ಯಪ್ರವೃತ್ತವಾಗಿದ್ದು, ತನ್ನ ಸ್ವಂತ ಸಿಬ್ಬಂದಿಗೇ 'ಡಾಗ್ ಕ್ಯಾಚಿಂಗ್' ಅಂದರೆ ನಾಯಿ ಹಿಡಿಯುವ ತರಬೇತಿ ನೀಡಲು ನಿರ್ಧರಿಸಿದೆ ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ಈ ಹಿಂದೆ ಸಿಬ್ಬಂದಿಯನ್ನು ತರಬೇತಿಗಾಗಿ ಗೋವಾಕ್ಕೆ ಕಳುಹಿಸುವ ಯೋಜನೆಯಿತ್ತಾದರೂ, ಈಗ ನಗರದ ಬೀದಿ ನಾಯಿಗಳ ಹಿತರಕ್ಷಣಾ ಸಮಿತಿಯಲ್ಲೇ ಪರಿಣಿತರಿರುವುದರಿಂದ ಸ್ಥಳೀಯವಾಗಿಯೇ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿ ಮೂಲಕ ಬೀದಿ ನಾಯಿಗಳನ್ನು ಸೆರೆಹಿಡಿದು ಅವುಗಳಿಗೆ ಸಂತಾನಹರಣ ಚಿಕಿತ್ಸೆ (ABC) ನೀಡುವ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಾಗುವುದು. ಇದರೊಂದಿಗೆ, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಾಯಿಗಳಿಗೆ ಆಹಾರ ಹಾಕುವುದರಿಂದ ಅವುಗಳ ಗುಂಪು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ನಗರಸಭೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಒಟ್ಟಾರೆಯಾಗಿ, ಟೆಂಡರ್ ಪ್ರಕ್ರಿಯೆಯ ವಿಫಲತೆ ಮತ್ತು ದತ್ತು ಯೋಜನೆಯ ನೀರಸ ಪ್ರತಿಕ್ರಿಯೆಯಿಂದ ನಗರಸಭೆ, 'ಸ್ವಶಕ್ತಿ'ಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು. ಸ್ಥಳೀಯವಾಗಿಯೇ ಸಿಬ್ಬಂದಿಗೆ ತರಬೇತಿ ನೀಡಿ, ವೈಜ್ಞಾನಿಕವಾಗಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ರೂಪಿಸಿರುವ ಈ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ..
ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು..
PublicNext
31/01/2026 05:43 pm