ಮಡಿಕೇರಿ: ಮೈಸೂರು- ಕುಶಾಲನಗರ ನಡುವಿನ ಸುಮಾರು 87 ಕಿ.ಮೀ ಉದ್ದದ ರೈಲು ಮಾರ್ಗದ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಪೂರ್ಣಗೊಳಿಸಿದೆ. ಆದರೆ ಸಂಸದ ಯದುವೀರ್ ಒಡೆಯರ್ ಅವರು ಈ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷö್ಮಣ್ ಅವರು ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು- ಕುಶಾಲನಗರ ರೈಲು ಮಾರ್ಗದ ಯೋಜನೆ ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ರೈಲ್ವೆ ಇಲಾಖೆ ಈ ಯೋಜನೆಯನ್ನು ಕೈಬಿಟ್ಟಿದೆ. ಆದರೆ ಸಂಸದರು ರಾಜ್ಯ ಸರಕಾರ ಭೂಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬ ಮಾಡಿರುವುದು ಕಾರಣವೆಂದು ಸುಳ್ಳು ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯದುವೀರ್ ಒಡೆಯರ್ ಅವರು ಸಂಸದರಾದ ನಂತರ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ರಾಜ್ಯದ ಒಟ್ಟು 236 ತಾಲ್ಲೂಕುಗಳಲ್ಲಿ ಕೊಡಗು ಜಿಲ್ಲೆಯ 5 ತಾಲ್ಲೂಕುಗಳು ಸೇರಿದಂತೆ 80 ತಾಲ್ಲೂಕುಗಳಿಗೆ ಇಂದಿಗೂ ರೈಲ್ವೆ ಮಾರ್ಗವಿಲ್ಲ ಎಂದರು.
ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡಲು ‘ಒಂದು ಜಿಲ್ಲೆ, ಒಂದು ಉತ್ಪಾದನೆ’ ಯೋಜನೆಯಡಿ 193 ಕೋಟಿ ರೂ.ಗಳ ಯೂನಿಟ್ ಮಾಲ್ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರಕಾರದ ಮೂಲಕ ಮಂಜೂರಾತಿ ದೊರೆತಿತ್ತು. ರಾಜ್ಯ ಸರಕಾರ ಇದಕ್ಕಾಗಿ ಮೈಸೂರಿನಲ್ಲಿ ಆರೂವರೆ ಎಕರೆ ಜಾಗವನ್ನು ಕೂಡ ನೀಡಿತ್ತು. ಸಂಸದ ಯದುವೀರ್ ಅವರು ಈ ಯೋಜನೆಗೆ ಭೂಮಿಪೂಜೆಯನ್ನು ಕೂಡ ನೆರವೇರಿಸಿದ್ದರು. ಆದರೆ ನಂತರದ ದಿನಗಳಲ್ಲಿ ಸಂಸದರ ತಾಯಿ ಇದು ನಮಗೆ ಸೇರಿದ ಜಾಗವೆಂದು ತಕರಾರು ತೆಗೆದರು. ಇದರಿಂದ 4ಲಕ್ಷ ಕರಕುಶಲ ಕರ್ಮಿಗಳಿಗೆ ತರಬೇತಿ ನೀಡಲು ಅನುಕೂಲಕರವಾಗಿದ್ದ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.
ಚಾಮುಂಡಿ ಬೆಟ್ಟದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 46 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಇದು ಕೂಡ ನೆನೆಗುದಿಗೆ ಬಿದ್ದಿದೆ. ಸುಮಾರು 175 ಕೋಟಿ ರೂ.ಗಳ ಕ್ಯಾನ್ಸರ್ ಸೆಂಟರ್ ಸ್ಥಾಪನೆಯಾಗಿಲ್ಲ, ಮೈಸೂರು ಏರ್‌ಪೋರ್ಟ್ ವಿಸ್ತರಣೆ ಕಾರ್ಯಕ್ಕೆ ಕಾಳಜಿ ತೋರಿಲ್ಲ, ರಿಂಗ್ ರೋಡ್ ಗೆ ಎಳ್ಳುನೀರು ಬಿಡಲಾಗಿದೆ ಎಂದು ಟೀಕಿಸಿದರು.
Kshetra Samachara
01/02/2026 10:53 am