ಮಡಿಕೇರಿ: ನಾಪೋಕ್ಲುವಿನಲ್ಲಿ ಶಾದಿಮಹಲ್ ನಿರ್ಮಾಣ ವಿಚಾರದಲ್ಲಿ ಗೊಂದಲ ಸೃಷ್ಟಿಸಿರುವ ಹಾಗೂ ಜಿಲ್ಲೆಯ ವಿವಿಧ ವಿಷಯಗಳ ಕುರಿತು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅವರು ವಿನಾಕಾರಣ ಮಾಜಿ ಶಾಸಕರನ್ನು ಗುರಿಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುತ್ತಿರುವುದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಕೇಶ್ ದೇವಯ್ಯ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಓಲೈಸುವ ಏಕೈಕ ಉದ್ದೇಶದಿಂದ ಮೈನಾ ಅವರು ಮಾಜಿ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಕೀಳು ಮಟ್ಟದ ಭಾಷೆಗಳನ್ನು ಬಳಸಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಪೋಕ್ಲು ಶಾದಿಮಹಲ್ ವಿವಾದ
ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ ಜಾಗದಲ್ಲಿ ಶಾದಿಮಹಲ್ ನಿರ್ಮಾಣಗೊಳ್ಳುತ್ತಿರುವ ಬಗ್ಗೆ ಬಿಜೆಪಿ ನಿಯಮಾನುಸಾರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ಜಿಲ್ಲಾಧಿಕಾರಿಗಳು ಕೂಡ ಕಾನೂನು ಪ್ರಕಾರ ಕಾಮಗಾರಿ ಸ್ಥಗಿತಕ್ಕೆ ಆದೇಶ ನೀಡಿದ್ದಾರೆ. ಆದರೂ, ಸರ್ವೆಯ ಮೂಲಕ ಸತ್ಯಾಂಶ ಹೊರಬೀಳುವವರೆಗೆ ಕಾಯುವಷ್ಟು ತಾಳ್ಮೆ ಇಲ್ಲದ ಮೈನಾ ಅವರು, ಈ ವಿಚಾರದಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ತೇಜೋವಧೆಗೆ ಮುಂದಾಗಿದ್ದಾರೆ ಎಂದು ರಾಕೇಶ್ ದೇವಯ್ಯ ದೂರಿದ್ದಾರೆ.
ಕಾಂಗ್ರೆಸ್‌ಗೆ ಬಿಜೆಪಿ ಸವಾಲು
ಶಾದಿಮಹಲ್ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಕಾಂಗ್ರೆಸ್ ಪ್ರತಿನಿಧಿಗಳೇ ನೇರ ಹೊಣೆಗಾರರೇ ಹೊರತು ಮಾಜಿ ಶಾಸಕರು ಅಲ್ಲ ಎಂದು ಸ್ಪಷ್ಟಪಡಿಸಿದ ರಾಕೇಶ್ ದೇವಯ್ಯ, ಕರ್ನಾಟಕ ಪಬ್ಲಿಕ್ ಶಾಲೆಗೆ ಸಂಬಂಧಿಸಿದ ಜಾಗದ ಕುರಿತು ಚರ್ಚಿಸಲು ದಾಖಲೆ ಸಹಿತ ತಾವು ಬರಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ಸಿಗರು ಒಂದೇ ವೇದಿಕೆಗೆ ಬಂದು ಚರ್ಚಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
PublicNext
02/02/2026 09:31 am