ಬೆಂಗಳೂರು: ಉದ್ಯಮಿ ಸಿ. ಜೆ. ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಸಿ. ಜೆ. ರಾಯ್ ಅವರ ಸಾಮ್ರಾಜ್ಯ ಪತನವಾಗುವ ಭೀತಿಯಿಂದ ಈ ನಿರ್ಧಾರಕ್ಕೆ ಬಂದಿರಬಹುದೇ? ಅಥವಾ ಆದಾಯ ತೆರಿಗೆ ವಂಚನೆ ಸಾಬೀತಾದಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿ ದಂಡ ಕಟ್ಟಬೇಕಾಗುತ್ತಿತ್ತು ಎಂಬ ಆತಂಕವೇ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿತೇ? ಅನ್ನೋ ಶಂಕೆ ಮೂಡಿದೆ.
ಆದಾಯ ತೆರಿಗೆ ಇಲಾಖೆಯ ತನಿಖೆ ಮತ್ತು ಆಸ್ತಿ ಕಳೆದುಕೊಳ್ಳುವ ಭೀತಿಯೇ ಉದ್ಯಮಿ ಸಿ. ಜೆ. ರಾಯ್ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಆಪ್ತ ಮೂಲಗಳು ಶಂಕೆ ವ್ಯಕ್ತಪಡಿಸಿವೆ.
ಕೇರಳದಲ್ಲಿ ನಡೆದ ದಾಳಿಯ ನಂತರ, ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಸಿ. ಜೆ. ರಾಯ್ ಅವರ ಆಸ್ತಿಗಳ ಲೆಕ್ಕಪತ್ರಗಳನ್ನು ಕೇಳಿದ್ದರಂತೆ. ಅಷ್ಟೇ ಅಲ್ಲದೆ, ಸುಮಾರು 12 ವರ್ಷಗಳ ಹಿಂದಿನ ಹಣಕಾಸು ವಹಿವಾಟುಗಳ ಬಗ್ಗೆಯೂ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ನಿಭಾಯಿಸಲು ಸಾಧ್ಯವಾಗದೆ ಸಿ. ಜೆ. ರಾಯ್ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಆದಾಯ ತೆರಿಗೆ ಲೆಕ್ಕಪತ್ರಗಳನ್ನು ಸರಿಪಡಿಸಬೇಕಾಗಿದ್ದರೆ, ಸಿ. ಜೆ. ರಾಯ್ ತಮ್ಮ ಬಹುತೇಕ ಆಸ್ತಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಆಪ್ತ ಮೂಲಗಳ ಪ್ರಕಾರ, ಇದೇ ಕಾರಣಕ್ಕೆ ಆತ್ಮಹತ್ಯೆಯ ಹೊರತು ಬೇರೆ ದಾರಿ ಇರಲಿಲ್ಲ ಎಂದು ಅವರು ಭಾವಿಸಿದ್ದರು.
ಐಷಾರಾಮಿ ಜೀವನಶೈಲಿಗೆ ಒಗ್ಗಿಕೊಂಡಿದ್ದ ಸಿ. ಜೆ. ರಾಯ್, ಆ ಜೀವನವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದ್ದರೇ ಎಂಬ ಪ್ರಶ್ನೆಯೂ ಮೂಡಿದೆ. ಈ ಎಲ್ಲಾ ಬೆಳವಣಿಗೆಗಳಿಗೂ ಆದಾಯ ತೆರಿಗೆ ಅಧಿಕಾರಿಗಳ ದಾಳಿಯೇ ಪ್ರಮುಖ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಐಟಿ ತನಿಖೆಯ ಒತ್ತಡ, ಬೃಹತ್ ದಂಡದ ಭೀತಿ ಮತ್ತು ಆಸ್ತಿ ಕಳೆದುಕೊಳ್ಳುವ ಆತಂಕವೇ ಸಿ.ಜೆ. ರಾಯ್ ಅವರ ಈ ದುರದೃಷ್ಟಕರ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
Kshetra Samachara
02/02/2026 12:46 pm